ಮಮತಾ ಬ್ಯಾನರ್ಜಿ
– ಪಿಟಿಐ ಚಿತ್ರ
ಕೋಲ್ಕತ್ತ: ದುರ್ಗಾ ಪೂಜೆಗೆ ಸರ್ಕಾರದಿಂದ ₹1.1 ಲಕ್ಷ ಅನುದಾನ ಘೋಷಿಸಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ, ಅಭಿವೃದ್ಧಿ ಬಿಟ್ಟು ಧರ್ಮ ರಾಜಕಾರಣ ಮಾಡುತ್ತಿದ್ದಾರೆ ಎಂದು ಟೀಕಿಸಿದೆ.
ಈ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಶಾಸಕಿ ಅಗ್ನಿಮಿತ್ರ ಪೌಲ್, ‘ಅಭಿವೃದ್ಧಿಯನ್ನು ಕಡೆಗಣಿಸಿ ಜನರಿಗೆ ಕೊಡುಗೆಗಳನ್ನು ಕೊಡುವುದರಲ್ಲಿಯೇ ಮಮತಾ ನೇತೃತ್ವದ ರಾಜ್ಯ ಸರ್ಕಾರ ನಿರತವಾಗಿದೆ’ ಎಂದು ದೂರಿದ್ದಾರೆ.
‘ದೇವಾಲಯಗಳನ್ನು ನಿರ್ಮಿಸುವುದು, ಪೂಜಾ ಕಾರ್ಯಕ್ಕೆ ಅನುದಾನ ನೀಡುವುದು ಸರ್ಕಾರದ ಉದ್ದೇಶವಾಗಬಾರದು’ ಎಂದು ಹೇಳಿದ್ದಾರೆ.
‘ಸರ್ಕಾರ ತನ್ನ ಆದ್ಯತೆಗಳನ್ನು ಬದಲಾಯಿಸುತ್ತಿದೆ ಎಂದು ಇದು ತೋರಿಸುತ್ತದೆ. ರಸ್ತೆಗಳನ್ನು ನಿರ್ಮಿಸುವ, ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಬದಲು ಮಮತಾ ಬ್ಯಾನರ್ಜಿ ಧರ್ಮದ ರಾಜಕೀಯದಲ್ಲಿ ನಿರತರಾಗಿದ್ದಾರೆ’ ಎಂದು ಕಿಡಿಕಾರಿದ್ದಾರೆ.
'ನಮ್ಮ ಪಕ್ಷವು ಶಿಕ್ಷಣ ಕ್ಷೇತ್ರವನ್ನು ಅಭಿವೃದ್ಧಿಪಡಿಸುವುದು, ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಮತ್ತು ಪ್ರತಿಯೊಬ್ಬ ಭಾರತೀಯ ನಾಗರಿಕನನ್ನೂ ಅವರ ಧರ್ಮವನ್ನು ಲೆಕ್ಕಿಸದೆ ಉನ್ನತೀಕರಿಸುವ ಪರವಾಗಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.