ADVERTISEMENT

ಟಿಎಂಸಿ ರಾಷ್ಟ್ರೀಯ ಪಕ್ಷ; ಅದು ದೇವಸ್ಥಾನ, ಮಸೀದಿ, ಚರ್ಚ್‌ ಪರ: ಮಮತಾ ಬ್ಯಾನರ್ಜಿ

ಪಿಟಿಐ
Published 29 ಅಕ್ಟೋಬರ್ 2021, 13:34 IST
Last Updated 29 ಅಕ್ಟೋಬರ್ 2021, 13:34 IST
ಪಣಜಿಯಲ್ಲಿ ಶುಕ್ರವಾರ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಮಮತಾ ಬ್ಯಾನರ್ಜಿ ಅವರ ಸಮ್ಮುಖದಲ್ಲಿ ಟಿಎಂಸಿ ಸೇರಿದರು. ಪಕ್ಷದ ಸಂಸದ ಡೆರೆಕ್ ಒಬ್ರಿಯಾನ್ ಇದ್ದರು (ಪಿಟಿಐ ಚಿತ್ರ)
ಪಣಜಿಯಲ್ಲಿ ಶುಕ್ರವಾರ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಮಮತಾ ಬ್ಯಾನರ್ಜಿ ಅವರ ಸಮ್ಮುಖದಲ್ಲಿ ಟಿಎಂಸಿ ಸೇರಿದರು. ಪಕ್ಷದ ಸಂಸದ ಡೆರೆಕ್ ಒಬ್ರಿಯಾನ್ ಇದ್ದರು (ಪಿಟಿಐ ಚಿತ್ರ)   

ಪಣಜಿ: ‘ತಮ್ಮದು ರಾಷ್ಟ್ರೀಯ ಪಕ್ಷ ಮತ್ತು ನಾವು ಎಲ್ಲಿಗೆ ಬೇಕಾದರೂ ಹೋಗಬಹುದು’ ಎಂದು ತೃಣಮೂಲ ಕಾಂಗ್ರೆಸ್ ವರಿಷ್ಠೆ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ನಮ್ಮ ಪಕ್ಷದ ಇನಿಶಿಯಲ್ಸ್‌ (ಮೊದಲಕ್ಷರಗಳು) ಟಿಎಂಸಿ ಎಂದರೆ ಟೆಂಪಲ್‌ (ದೇವಸ್ಥಾನ), ಮಾಸ್ಕ್‌ (ಮಸೀದಿ), ಚರ್ಚ್‌ ಸೂಚಿಸುತ್ತದೆ. ಆದರೆ, ಬಿಜೆಪಿ ನನ್ನನ್ನು ಹಿಂದೂ ವಿರೋಧಿ ಎಂದು ಕರೆಯುತ್ತದೆ, ನನಗೆ ವ್ಯಕ್ತಿತ್ವದ ಪ್ರಮಾಣ ಪತ್ರ ನೀಡುವ ಹಕ್ಕು ಯಾರಿಗೂ ಇಲ್ಲ ಎಂದು ಮಮತಾ ಹೇಳಿದ್ದಾರೆ.

ಗೋವಾದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೂರು ದಿನಗಳು ಪ್ರವಾಸ ಕೈಗೊಳ್ಳಲು ಗೋವಾಕ್ಕೆ ಭೇಟಿ ನೀಡಿರುವ ಅವರು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ADVERTISEMENT

2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ ವೇಳೆ ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದೀರಾ ಎಂಬ ಪ್ರಶ್ನೆಗೆ ಅವರು ನೇರ ಉತ್ತರ ನೀಡದೆ ನುಣುಚಿಕೊಂಡರು. ‘ಈಗಲೇ ಎಲ್ಲವನ್ನೂ ಹೇಳಿದರೆ, ನಂತರ ಏನು ಹೇಳಲಿ’ ಎಂದು ಅವರು ಮರು ಪ್ರಶ್ನಿಸಿದರು.

ಈ ವರ್ಷದ ಆರಂಭದಲ್ಲಿ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್‌ ಅದ್ಭುತ ವಿಜಯ ಸಾಧಿಸಿದ ನಂತರ, ಬ್ಯಾನರ್ಜಿ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಪಾತ್ರ ವಹಿಸಲು ಎದುರು ನೋಡುತ್ತಿದ್ದಾರೆ ಎಂಬ ಊಹಾಪೋಹಗಳು ಎದ್ದಿವೆ.

‘ನಾವು ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸುವುದಿಲ್ಲ. ನಾವು ಜನರನ್ನು ಒಗ್ಗೂಡಿಸುತ್ತೇವೆ. ಗೋವಾಕ್ಕಾಗಿ ದೃಢ ಮನಸ್ಸಿನಿಂದ ಕೆಲಸ ಮಾಡುತ್ತೇವೆ. ನೀವು ಎಲ್ಲ (ಇತರ) ಪಕ್ಷಗಳಿಗೆ ಅವಕಾಶ ನೀಡಿದ್ದೀರಿ, ಈಗ ಟಿಎಂಸಿಗೆ ಒಂದು ಅವಕಾಶ ನೀಡಿ’ ಎಂದು ಮಮತಾ ಬ್ಯಾನರ್ಜಿ ಗೋವಾ ಜನತೆಗೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.