ADVERTISEMENT

‘ನಾ ಒಪ್ಪಲಾರೆ..,’ ಚುನಾವಣಾ ಹಿನ್ನಡೆ ಬಳಿಕ ದೀದಿ ಬರೆದ ಪದ್ಯದಲ್ಲಿ ಏನಿದೆ? 

ಏಜೆನ್ಸೀಸ್
Published 25 ಮೇ 2019, 9:08 IST
Last Updated 25 ಮೇ 2019, 9:08 IST
   

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ತೀವ್ರ ಹಣಾಹಣಿಯ ನಡುವೆ ಬಿಜೆಪಿ 18 ಸ್ಥಾನಗಳಲ್ಲಿ ಜಯ ಸಾಧಿಸಿದೆ. ಇದೇ ವೇಳೆ ಟಿಎಂಸಿ ಈ ಬಾರಿ ಕಳಪೆ ಸಾಧನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಇಂದು ‘ನಾ ಒಪ್ಪಲಾರೆ’ ಎಂಬ ಶೀರ್ಷಿಕೆಯುಳ್ಳ ಪದ್ಯವೊಂದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಜೆಪಿ ವಿರುದ್ಧ ಸಾತ್ವಿಕ ಪ್ರತಿಭಟನೆ ಪ್ರದರ್ಶಿಸಿದ್ದಾರೆ.

‘ಕೋಮುವಾದದ ಬಣ್ಣದಲ್ಲಿ ನನಗೆ ನಂಬಿಕೆ ಇಲ್ಲ. ಸೈರಣೆ, ಆಕ್ರಮಣಶೀಲತೆ ಎಲ್ಲ ಧರ್ಮಗಳಲ್ಲೂ ಇರುವಂಥದ್ದೇ. ಬಂಗಾಳದಲ್ಲಿ ಉದ್ಭವಿಸಿದ ವಿನಯಶೀಲ ಸೇವಕಿ ನಾನು. ಧಾರ್ಮಿಕ ಆಕ್ರಮಣಶೀಲತೆಯ ಮಾರಾಟವನ್ನು ನಾನು ನಂಬುವುದಿಲ್ಲ. ಮಾನವತ್ವದಿಂದ ಬಂದ ಧರ್ಮವನ್ನು ಮಾತ್ರ ನಾನು ನಂಬುತ್ತೇನೆ,’ ಎಂಬ ಒಕ್ಕಣೆಯುಳ್ಳ ಪದ್ಯವನ್ನು ಅವರು ಬರೆದುಕೊಂಡಿದ್ದಾರೆ.

‘ನಾ ಒಪ್ಪಲಾರೆ,’ ಎಂಬ ಈ ಪದ್ಯ ಇಂಗ್ಲಿಷ್‌ನಲ್ಲಿದೆ. ಆದರೆ, ಈ ಪದ್ಯದಲ್ಲಿ ಅವರು ಯಾರ ಹೆಸರುಗಳನ್ನೂ ಉಲ್ಲೇಖಿಸಿಲ್ಲ. ಆದರೆ, ಈ ಎರಡು ವರ್ಷಗಳಲ್ಲಿ ಬಿಜೆಪಿ ಜತೆ ತೀವ್ರ ಸೆಣಸಾಟ ನಡೆಸಿರುವ ಅವರು, ಬಿಜೆಪಿ ವಿರುದ್ಧವೇ ಇದನ್ನುಬರೆದಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಅಲ್ಲದೆ, ಬಿಜೆಪಿ ಧಾರ್ಮಿಕ ಧ್ರುವೀಕರಣಕ್ಕೆ ಕೈ ಹಾಕಿ ಚುನಾವಣೆ ಗೆಲ್ಲಲು ಹೊರಟಿದೆ ಎಂದು ಮಮತಾ ಅವರುಪ್ರಚಾರದ ವೇಳೆಪದೇ ಪದೇ ಆರೋಪ ಮಾಡುತ್ತಿದ್ದರು. ಈ ಪದ್ಯ ಕೂಡ, ಕೋಮುವಾದದ ವಿರುದ್ಧದ ಧಾಟಿಯಲ್ಲೇ ಇದ್ದು,ಬಿಜೆಪಿ ನಡೆಯನ್ನು ಮಮತಾವಿಮರ್ಶೆಗೊಳಪಡಿಸಿದ್ದಾರೆ ಎನ್ನಲಾಗಿದೆ.

ADVERTISEMENT

ಹೆಚ್ಚು ಸ್ಥಾನಗಳನ್ನು ಗಳಿಸಲು ಯಾವಾಗ ಬಿಜೆಪಿ ಪಶ್ಚಿಮ ಬಂಗಾಳಕ್ಕೆ ಕಾಲಿಟ್ಟಿತೋ ಆಗಿನಿಂದಲೂ ಮಮತಾ ಬ್ಯಾನರ್ಜಿ ಮತ್ತು ಮೋದಿ–ಅಮಿತ್‌ ಶಾ ಜೋಡಿಯ ನಡುವೆ ಸೆಣಸಾಟ ಆರಂಭವಾಯಿತು. ಮತದಾನ ನಡೆದ ಏಳೂ ಹಂತಗಳಲ್ಲೂ ಹಿಂಸಾಚಾರಗಳು ಸಂಭವಿಸಿದವು. ಕೊನೆಗೆ ಚುನಾವಣೆ ಫಲಿತಾಂಶ ಪ್ರಕಟವಾದಾಗ ಬಿಜೆಪಿ ಬಂಗಾಳದಲ್ಲಿ ಉತ್ತಮ ಬೆಳೆಯನ್ನೇ ಬೆಳೆದಿತ್ತು. 18 ಸ್ಥಾನಗಳಲ್ಲಿ ಗೆದ್ದು ಮಮತಾ ಬ್ಯಾನರ್ಜಿಗೆ ಹಿನ್ನಡೆ ಉಂಟು ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.