ಕೋಲ್ಕತ್ತ: ಗೋರ್ಖಾಗಳ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಮಾತುಕತೆ ನಡೆಸಲು ಸಂಧಾನಕಾರರನ್ನು ನೇಮಿಸಿರುವ ಕೇಂದ್ರ ಸರ್ಕಾರದ ನಡೆಯ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶನಿವಾರ ಅಚ್ಚರಿ ಹಾಗೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬೆಳವಣಿಗೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರಿಗೂ ಪತ್ರ ಬರೆದಿರುವ ಬ್ಯಾನರ್ಜಿ, ಸಂಧಾನಕಾರರ ನೇಮಕವನ್ನು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.
ಡಾರ್ಜಿಲಿಂಗ್ ಬೆಟ್ಟ ಪ್ರದೇಶ, ದೂಆರ್ಸ್ ಹಾಗೂ ಟೆರೈ ಪ್ರಾಂತ್ಯಗಳಲ್ಲಿರುವ ಗೋರ್ಖಾ ಸಮುದಾಯಗಳ ಸಮಸ್ಯೆಗಳ ಕುರಿತು ಮಾತುಕತೆ ನಡೆಸಲು ನಿವೃತ್ತ ಐಪಿಎಸ್ ಅಧಿಕಾರಿ ಪಂಕಜ್ ಕುಮಾರ್ ಅವರನ್ನು ಕೇಂದ್ರ ಸರ್ಕಾರ ನೇಮಿಸಿತ್ತು.
ಇದಕ್ಕೆ ಪ್ರತಿಕ್ರಿಯಿಸಿರುವ ಬ್ಯಾನರ್ಜಿ, ‘ಪಶ್ಚಿಮ ಬಂಗಾಳ ಸರ್ಕಾರದ ಜತೆಗೆ ಯಾವುದೇ ಮಾತುಕತೆ ನಡೆಸದೇ, ರಾಜ್ಯ ಸರ್ಕಾರದ ಗಮನಕ್ಕೂ ತರದೇ ಕೇಂದ್ರ ಸರ್ಕಾರವು ಈ ನೇಮಕವನ್ನು ಮಾಡಿದೆ. ಇದು ಒಕ್ಕೂಟ ವ್ಯವಸ್ಥೆಗೆ ತಕ್ಕುದಲ್ಲ’ ಎಂದಿದ್ದಾರೆ.
ಅಲ್ಲದೇ, ಗೋರ್ಖಾಗಳ ಸಮಸ್ಯೆಯು ಆಡಳಿತ, ಶಾಂತಿ ಮತ್ತು ಆಡಳಿತಾತ್ಮಕ ಸ್ಥಿರತೆಗೆ ಸಂಬಂಧಿಸಿದ್ದಾಗಿದೆ. ಇದು ಪಶ್ಚಿಮ ಬಂಗಾಳ ಸರ್ಕಾರದ ಅಡಿಯಲ್ಲಿರುವ ಸ್ವಾಯತ್ತ ಸಂಸ್ಥೆಯಾಗಿರುವ ಗೋರ್ಖಾಲ್ಯಾಂಡ್ ಪ್ರಾದೇಶಿಕ ಆಡಳಿತದ (ಜಿಟಿಎ) ವ್ಯಾಪ್ತಿಗೆ ಸೇರಿದ್ದಾಗಿದೆ. ಹೀಗಿದ್ದರೂ, ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಸಹಮತ ಪಡೆಯದೇ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿದೆ’ ಎಂದು ಆರೋಪಿಸಿದ್ದಾರೆ.
ಇಂಥ ಸೂಕ್ಷ್ಮ ವಿಚಾರದಲ್ಲಿ ಏಕಪಕ್ಷೀಯ ನಿಲುವು ಸರಿಯಲ್ಲ. ಹೀಗಾಗಿ ಕೇಂದ್ರದ ಕ್ರಮವನ್ನು ಮರು ಪರಿಶೀಲಿಸಿ, ನೇಮಕವನ್ನು ರದ್ದುಗೊಳಿಸಬೇಕು ಎಂದು ಪ್ರಧಾನಿ ಮೋದಿ ಅವರಿಗೆ ಮಮತಾ ಬ್ಯಾನರ್ಜಿ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.