ADVERTISEMENT

ದೂರವಾಣಿಯಲ್ಲಿ ಕಿತ್ತಾಡಿದ ಮಮತಾ–ರಾಜನಾಥ್‌ ಸಿಂಗ್!

ಪಶ್ಚಿಮ ಬಂಗಾಳದಲ್ಲಿ ಶಾ ರ‍್ಯಾಲಿ ನಂತರ ಹಿಂಸಾಚಾರ

ಪಿಟಿಐ
Published 30 ಜನವರಿ 2019, 20:30 IST
Last Updated 30 ಜನವರಿ 2019, 20:30 IST
ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್ ಮತ್ತು  ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ    

ಕೋಲ್ಕತ್ತ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್ ಪರಸ್ಪರ ದೂರವಾಣಿಯಲ್ಲಿಯೇ ಕಿತ್ತಾಡಿಕೊಂಡಿದ್ದಾರೆ.

ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಜಿಲ್ಲೆಯ ಕಾಂಠಿ ಎಂಬಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾಮಂಗಳವಾರ ನಡೆಸಿದ ರ‍್ಯಾಲಿ ನಂತರ ಹಿಂಸಾಚಾರ ನಡೆದಿತ್ತು.ಇದಕ್ಕೆ ಸಂಬಂಧಿಸಿದಂತೆ 24 ಗಂಟೆ ಒಳಗಾಗಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ರಾಜನಾಥ್‌ ಸೂಚಿಸಿದ್ದರು.

ಘಟನೆ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಿಂಗ್‌, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು.

ADVERTISEMENT

ಇದರಿಂದ ಕೆಂಡಾಮಂಡಲವಾದ ಮಮತಾ ಬ್ಯಾನರ್ಜಿ, ಮೊದಲು ಬಿಜೆಪಿನಾಯಕರು, ಕಾರ್ಯಕರ್ತರನ್ನು ಹದ್ದು ಬಸ್ತಿನಲ್ಲಿ ಇಟ್ಟುಕೊಳ್ಳುವಂತೆ ಸೂಚಿಸಿದರು.

ರಾಜ್ಯದಲ್ಲಿ ಅಶಾಂತಿ ಸೃಷ್ಟಿಸುತ್ತಿರುವ ಮೂಲಕ ಕಾನೂನು, ಸುವ್ಯವಸ್ಥೆಗೆ ಭಂಗ ತರಲು ಯತ್ನಿಸುತ್ತಿರುವ ಬಿಜೆಪಿಯ ಆಟಾಟೋಪಗಳಿಗೆ ಕಡಿವಾಣ ಹಾಕುವಂತೆ ತರಾಟೆಗೆ ತೆಗೆದುಕೊಂಡರು ಎಂದು ಮೂಲಗಳು ತಿಳಿಸಿವೆ.

ಕಾಂಠಿ ಪಟ್ಟಣದಲ್ಲಿ ಬಿಜೆಪಿ ರ‍್ಯಾಲಿಯಲ್ಲಿ ಶಾ ಅವರು ಮಮತಾ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕೋಟ್ಯಂತರ ರೂಪಾಯಿ ಹಣ ತೆತ್ತು ತಮ್ಮ ಕಲಾಕೃತಿಗಳನ್ನು ಖರೀದಿಸಿದ್ದಾರೆ ಎಂಬ ಕಾರಣಕ್ಕಾಗಿ ಚಿಟ್‌ಫಂಡ್‌ ಹಗರಣದ ಆರೋಪಿಗಳನ್ನು ಮಮತಾ ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ರ‍್ಯಾಲಿ ಮುಗಿಯುತ್ತಲೇ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರು ಬೀದಿ ಕಾಳಗಕ್ಕೆ ಇಳಿದ ಕಾರಣ ಕಾಂಠಿ ಪಟ್ಟಣ ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿತ್ತು.

ಕಲ್ಲು ತೂರಾಟದಲ್ಲಿ 200ಕ್ಕೂ ಹೆಚ್ಚು ಬಸ್‌, ಟ್ರ್ಯಾಕ್ಟರ್‌ ಮತ್ತು ಇತರ ವಾಹನಗಳು ಜಖಂಗೊಂಡಿದ್ದು, ಹಲವು ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆತ್ತು. ತೃಣಮೂಲ ಕಾಂಗ್ರೆಸ್‌ ಕಚೇರಿಗಳ ಮೇಲೆ ದಾಳಿ ನಡೆಸಿ, ಪೀಠೋಪಕರಣಗಳನ್ನು ಧ್ವಂಸಗೊಳಿಸಲಾಗಿತ್ತು. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ.

ಸಂಜೆಯವರೆಗೆ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಸ್ಥಳದಲ್ಲಿ ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು ಪರಿಸ್ಥಿತಿ ಹತೋಟಿಗೆ ಬಂದಿದೆ. ಇದುವರೆಗೂ 11 ಜನರನ್ನು ಬಂಧಿಸಲಾಗಿದೆ. ಬಂಧಿತರೆಲ್ಲ ಬಿಜೆಪಿ ಕಾರ್ಯಕರ್ತರು ಎಂದು ಹೇಳಲಾಗಿದೆ.

ಹಿಂಸಾಚಾರ ಕುರಿತು ಬಿಜೆಪಿ ಮತ್ತುತೃಣಮೂಲ ಕಾಂಗ್ರೆಸ್‌ ನಾಯಕರು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.