ADVERTISEMENT

ಮಮತಾರ ₹20 ಸಾವಿರ ಕೋಟಿ ಪರಿಹಾರ ಬೇಡಿಕೆ ಅವಾಸ್ತವಿಕ: ದಿಲೀಪ್ ಘೋಷ್

ಪಿಟಿಐ
Published 29 ಮೇ 2021, 16:17 IST
Last Updated 29 ಮೇ 2021, 16:17 IST
ದಿಲೀಪ್ ಘೋಷ್ - ಪಿಟಿಐ ಚಿತ್ರ
ದಿಲೀಪ್ ಘೋಷ್ - ಪಿಟಿಐ ಚಿತ್ರ   

ಕೋಲ್ಕತ್ತ: ಚಂಡಮಾರುತದಿಂದ ಆಗಿರುವ ಹಾನಿಗೆ ₹20 ಸಾವಿರ ಕೋಟಿ ಪರಿಹಾರ ನೀಡಬೇಕು ಎಂಬ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಬೇಡಿಕೆ ವಸ್ತುಸ್ಥಿತಿಯ ಅರಿವಿಲ್ಲದೇ ಮಾಡಿರುವುದು ಎಂದು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ.

ತಾವು ಮುಂದಿಟ್ಟಿರುವ ಬೇಡಿಕೆಗೆ ವಿವರವಾದ ವರದಿ ಒಪ್ಪಿಸುವುದನ್ನು ತಪ್ಪಿಸುವ ಸಲುವಾಗಿಯೇ ಮಮತಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಪರಾಮರ್ಶೆ ಸಭೆಗೆ ಗೈರಾಗಿದ್ದಾರೆ ಎಂದೂ ಘೋಷ್ ಹೇಳಿದ್ದಾರೆ.

‘ಒಡಿಶಾದವರೂ ಚಂಡಮಾರುತದ ತೀವ್ರತೆಯನ್ನು ಎದುರಿಸಬೇಕಾಗಿ ಬಂದಿತ್ತು. ಬಂಗಾಳದಲ್ಲಿ ಹಾನಿ ತಪ್ಪಿಸಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆದರೂ ಅವರು ₹20 ಸಾವಿರ ಕೋಟಿ ಪರಿಹಾರ ಕೇಳಿದ್ದಾರೆ. ತಮ್ಮ ಅವಾಸ್ತವಿಕ ಬೇಡಿಕೆಯ ಬಗ್ಗೆ ವಿವರಣೆ ನೀಡಲು ಸಾಧ್ಯವಾಗದ ಮಮತಾ ಪ್ರಧಾನಿಯವರ ಸಭೆಗೆ ಗೈರಾಗಿದ್ದಾರೆ’ ಎಂದು ಘೋಷ್ ಹೇಳಿದ್ದಾರೆ.

ಪ್ರಧಾನಿಯವರಿಗೆ ಎರಡು ಪ್ರಸ್ತಾವಗಳನ್ನು ಸಲ್ಲಿಸಲಾಗಿದ್ದು, ಚಂಡಮಾರುತದಿಂದ ಹಾನಿಗೊಳಗಾಗಿರುವ ದಿಘಾ ಮತ್ತು ಸುಂದರ್‌ಬನ್ಸ್ ಪ್ರವಾಸಿ ತಾಣಗಳನ್ನು ಮರುರೂಪಿಸಲು ತಲಾ ₹10 ಸಾವಿರ ಕೋಟಿಯಂತೆ ಪರಿಹಾರ ಕೋರಲಾಗಿದೆ ಎಂದು ಮಮತಾ ಅವರು ಶುಕ್ರವಾರ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.