ADVERTISEMENT

ಕರ್ನಾಟಕದಲ್ಲಿ ಬ್ಯಾಂಕ್ ದರೋಡೆ ನಡೆಸಿದ್ದ ‘ಮಮು ಗ್ಯಾಂಗ್‌‘ನ ಸಂಚುಕೋರನ ಬಂಧನ

ಪಿಟಿಐ
Published 7 ನವೆಂಬರ್ 2025, 15:35 IST
Last Updated 7 ನವೆಂಬರ್ 2025, 15:35 IST
   

ನವದೆಹಲಿ: ಕರ್ನಾಟಕ ಮತ್ತು ಮಹಾರಾಷ್ಟ್ರದ ಹಲವು ಬ್ಯಾಂಕ್‌ಗಳಲ್ಲಿ ದರೋಡೆ ನಡೆಸಿರುವ ‘ಮಮು ಗ್ಯಾಂಗ್‌’ನ ಪ್ರಮುಖ ಸಂಚುಕೋರ, ಹಣ್ಣಿನ ವ್ಯಾಪಾರಿಯ ವೇಷದಲ್ಲಿದ್ದ ವ್ಯಕ್ತಿಯನ್ನು ದೆಹಲಿ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಈ ಮೂಲಕ ಕರ್ನಾಟಕದಲ್ಲಿ ಮೂರು ಪ್ರಮುಖ ಬ್ಯಾಂಕ್‌ಗಳಲ್ಲಿ ದರೋಡೆ ನಡೆಸಿರುವ ಜಾಲವನ್ನು ಪೊಲೀಸರು ಭೇದಿಸಿದ್ದಾರೆ.

ಬಂಧಿತ ಆರೋಪಿ ಕಮ್ರುಲ್ ಅಲಿಯಾಸ್‌ ಮಮು ಉತ್ತರ ಪ್ರದೇಶ ನಿವಾಸಿಯಾಗಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಹಲವು ಬ್ಯಾಂಕ್‌ ದರೋಡೆಗಳನ್ನು ನಡೆಸಿ, ತಲೆಮರೆಸಿಕೊಂಡಿದ್ದ. ಗ್ಯಾಂಗ್‌ನ ನಾಯಕನಾಗಿದ್ದ ಆತ ದರೋಡೆ ಸಂಚು ರೂಪಿಸುವುದರಲ್ಲಿ ಮತ್ತು ವೇಷ ಬದಲಿಸುತ್ತಾ ಓಡಾಡುವುದರಲ್ಲಿ ನಿಷ್ಣಾತನಾಗಿದ್ದ. 

ADVERTISEMENT

‘ಹಣ್ಣಿನ ವ್ಯಾಪಾರಿಯ ಸೋಗಿನಲ್ಲಿ ಜನರ ಮಧ್ಯೆ ಇರುತ್ತಿದ್ದ ಆರೋಪಿ ಬ್ಯಾಂಕ್ ಸುತ್ತಮುತ್ತಲಿನ ವಾತಾವರಣವನ್ನು ಗಮನಿಸುತ್ತಿದ್ದ, ದೈನಂದಿನ ಚಟುವಟಿಕೆಗಳು, ಭದ್ರತಾ ಲೋಪಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದ. ರಾತ್ರಿ ವೇಳೆ ತನ್ನ ಸಹಚರರೊಂದಿಗೆ ಬ್ಯಾಂಕ್‌ ದರೋಡೆ ಮಾಡುತ್ತಿದ್ದ’ ಎಂದು ಪೊಲೀಸ್‌ ಅಧಿಕಾರಿ ಶುಕ್ರವಾರ ತಿಳಿಸಿದ್ದಾರೆ. 

ಆತನ ಚಲನವಲನದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ನೈರುತ್ಯ ದೆಹಲಿಯ ಮಹಾವೀರ ಪ್ರದೇಶದಲ್ಲಿ ಬಂಧಿಸಿದ್ದಾರೆ. ಆತ ಸ್ಥಳೀಯ ಮಾರುಕಟ್ಟೆಯಲ್ಲಿ ಹಣ್ಣಿನ ವ್ಯಾಪಾರಿಯ ವೇಷದಲ್ಲಿದ್ದ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.