ADVERTISEMENT

ಸಾಮೂಹಿಕ ಅತ್ಯಾಚಾರ ಪ್ರಕರಣ: ಪಾರಾಗಲು ಯತ್ನಿಸಿದ ಆರೋಪಿಗೆ ಗುಂಡೇಟು

ಉತ್ತರ ಪ್ರದೇಶದ ಮೀರತ್‌ ಘಟನೆಯಲ್ಲಿ ಬಂಧಿತರಾಗಿದ್ದ ಇಬ್ಬರು

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2021, 11:57 IST
Last Updated 3 ಏಪ್ರಿಲ್ 2021, 11:57 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮೀರತ್/ನವದೆಹಲಿ: ಹತ್ತನೇ ತರಗತಿ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಬಂಧಿಸಲಾಗಿದ್ದ ಇಬ್ಬರು ಆರೋಪಿಗಳು ಕೋರ್ಟ್‌ಗೆ ಕರೆದೊಯ್ಯುವಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಮತ್ತೆ ಸೆರೆಹಿಡಿಯುವ ಯತ್ನದಲ್ಲಿ ಪೊಲೀಸರು ಗುಂಡು ಹಾರಿಸಿದ್ದು, ಒಬ್ಬನಿಗೆ ಪೆಟ್ಟಾಗಿದೆ.

ನಾಲ್ವರು ಆರೋಪಿಗಳಲ್ಲಿ ಲಖನ್‌ ಮತ್ತು ವಿಕಾಸ್‌ ಅವರನ್ನು ಬಂಧಿಸಲಾಗಿತ್ತು. ಕೋರ್ಟ್‌ಗೆ ಹಾಜರುಪಡಿಸಲು ಒಯ್ಯುವಾಗ ಇನ್‌ಸ್ಪೆಕ್ಟರ್‌ರ ಪಿಸ್ತೂಲು ಕಸಿದುಕೊಂಡು ಪರಾರಿಯಾಗಿದ್ದರು. ಹಿಡಿಯಲು ಮುಂದಾಗಿದ್ದ ಪೊಲೀಸರ ಮೇಲೇ ಗುಂಡು ಹಾರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಮೇಲೆ ಲಖನ್‌ ಗುಂಡು ಹಾರಿಸಿದ್ದ. ಪೊಲೀಸರೂ ಪ್ರತಿಯಾಗಿ ಗುಂಡು ಹಾರಿಸಿದ್ದು, ಲಖನ್‌ನ ಕಾಲಿಗೆ ಬಿದ್ದಿತ್ತು. ಬಳಿಕ ಇಬ್ಬರನ್ನು ಮತ್ತೆ ಬಂಧಿಸಿದ್ದು, ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಮೀರತ್‌ ಗ್ರಾಮೀಣ ವಿಭಾಗದ ಎಸ್‌ಪಿ ಕೇಶವ್‌ ಕುಮಾರ್‌ ತಿಳಿಸಿದರು.

ADVERTISEMENT

ಘಟನೆ ವಿವರ: ಪರಿಶಿಷ್ಟ ಜಾತಿಯ 10ನೇ ತರಗತಿ ವಿದ್ಯಾರ್ಥಿನಿಯೊಬ್ಬರ ಮೇಲೆ, ಸಹಪಾಠಿ ಸೇರಿ ನಾಲ್ವರುಪಾಳುಬಿದ್ದಿದ್ದ ಮನೆಯೊಂದಕ್ಕೆ ಕರೆದೊಯ್ದು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದು, ಬಾಲಕಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದರು.

ಮನೆಯಲ್ಲಿ ಪೋಷಕರಿಗೆ ಘಟನೆ ತಿಳಿಸಿದ್ದ ಬಾಲಕಿ ಕೊಠಡಿಗೆ ತೆರಳಿ ಕದ ಹಾಕಿಕೊಂಡಿದ್ದು, ವಿಷ ಸೇವಿಸಿದ್ದರು. ಅದಕ್ಕೂ ಮುನ್ನ ಪತ್ರ ಬರೆದಿದ್ದು, ಇಬ್ಬರು ಆರೋಪಿಗಳ ಹೆಸರನ್ನು ಉಲ್ಲೇಖಿಸಿದ್ದರು. ಅದರ ಆಧಾರದಲ್ಲಿ ಇಬ್ಬರನ್ನೂ ಪೊಲೀಸರು ಬಂಧಿಸಿದ್ದರು.

ಆರೋಪಿಗಳೇ ಬಾಲಕಿಗೆ ವಿಷ ಕುಡಿಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಪತ್ರ ಬಾಲಕಿಯೇ ಬರೆದಿದ್ದೇ ಎಂಬುದನ್ನು ಖಾತರಿಪಡಿಸಿಕೊಳ್ಳಲು ಪರಿಣತರು ಕೈಬರಹ ಪರಿಶೀಲಿಸಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೃತ್ಯ ಕುರಿತು ವಿರೋಧಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್‌ ಯಾದವ್‌, ಮುಖ್ಯಮಂತ್ರಿ ವಿರುದ್ಧ ಹರಿಹಾಯ್ದಿದ್ದು ಬಿಜೆಪಿ ಪರವಾಗಿ ಪ್ರಚಾರಕ್ಕೆ ಬದಲಾಗಿ ರಾಜ್ಯದಲ್ಲಿ ಅಪರಾಧ ಪ್ರಕರಣಗಳ ತಡೆಗೆ ಹೆಚ್ಚಿನ ಸಮಯ ವಿನಿಯೋಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಮಹಿಳೆಯ ವಿರುದ್ಧದ ದೌರ್ಜನ್ಯ ತಡೆಯಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ ವಿಫಲವಾಗಿದೆ ಎಂದು ಸಮಾಜವಾದಿ ಪಕ್ಷದ ಹಿರಿಯ ನಾಯಕ ಸುನಿಲ್ ಸಿಂಗ್ ಸಜ್ಜನ್‌ ತರಾಟೆಗೆ ತೆಗೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.