ADVERTISEMENT

ಹೋಟೆಲ್‌, ಬೇಕರಿಗಳಿಗಾಗಿ ಇಟ್ಟಿದ್ದ 500 kg ಕೊಳೆತ ಕೋಳಿ ಮಾಂಸ ವಶ: ಒಬ್ಬನ ಬಂಧನ

ಪಿಟಿಐ
Published 24 ಜನವರಿ 2023, 10:39 IST
Last Updated 24 ಜನವರಿ 2023, 10:39 IST
   

ಕೊಚ್ಚಿ: ಹೋಟೆಲ್‌ಗಳು ಮತ್ತು ಬೇಕರಿಗಳಿಗೆ ಸರಬರಾಜು ಮಾಡಲು ಸಂಗ್ರಹಿಸಿಟ್ಟಿದ್ದ 500 ಕೆ.ಜಿ ಕೊಳೆತ ಕೋಳಿ ಮಾಂಸವನ್ನು ವಶಪಡಿಸಿಕೊಂಡಿರುವ ಕೇರಳ ಪೊಲೀಸರು, ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಮಲಪ್ಪುರಂ ಜಿಲ್ಲೆಯ ಪೊನ್ನನಿಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಜುನೈಸ್‌ನನ್ನು ಕಸ್ಟಡಿಗೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

‘ಸೋಮವಾರ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಇಂದು ಆತನನ್ನು ಬಂಧಿಸಲಾಗಿದೆ. ಹೋಟೆಲ್ ಮತ್ತು ಬೇಕರಿಗಳಿಗೆ ವಿತರಿಸಲು ಆರೋಪಿಯು ತಮಿಳುನಾಡಿನಿಂದ ಕೊಳೆತ ಮಾಂಸವನ್ನು ತಂದಿದ್ದ’ಎಂದು ಅವರು ಹೇಳಿದ್ದಾರೆ.

ADVERTISEMENT

‘ಕಳೆದ ಎರಡು ವರ್ಷಗಳಿಂದ ಈತ ಇದೇ ಕೆಲಸ ಮಾಡುತ್ತಿದ್ದು, ಹೆಚ್ಚುವರಿ ಮಾಹಿತಿಗಾಗಿ ವಿಚಾರಣೆ ಮುಂದುವರಿಸಿದ್ದೇವೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಯೊಂದರಲ್ಲಿ ಶೇಖರಿಸಿಟ್ಟಿರುವ ಮಾಂಸವು ಕೆಟ್ಟ ವಾಸನೆ ಬರುತ್ತಿರುವ ಬಗ್ಗೆ ಮಲಮಸ್ಸೇರಿ ನಗರಸಭೆಗೆ ಅಕ್ಕಪಕ್ಕದ ನಿವಾಸಿಗಳು ದೂರು ನೀಡಿದ್ದರು.


ಜನವರಿ 12ರಂದು ಮನೆ ಮೇಲೆ ದಾಳಿ ಮಾಡಿದಾಗ, ಎರಡು ಫ್ರೀಜರ್‌ನಲ್ಲಿ ಶೇಖರಿಸಿಟ್ಟಿದ್ದ ಮಾಂಸ ಮತ್ತು ಚಿಕನ್ ರೋಸ್ಟ್ ಮಾಡಲು ಬಳಸುವ ಉಪಕರಣ ಹಾಗೂ ಮಸಾಲೆ ಪದಾರ್ಥಗಳು ಪತ್ತೆಯಾಗಿದ್ದವು.

ಯಾವುದೇ ಪರವಾನಗಿ ಇಲ್ಲದೆ ಅಲ್ಲಿ ಮಾಂಸ ಶೇಖರಣೆ ಉದ್ಯಮ ನಡೆಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಮಾಂಸವನ್ನು ಜುನೈಸ್, ಶವರ್ಮಾ ಮಾಡಲು ಎರ್ನಾಕುಲಂಗೆ ಸರಬರಾಜು ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಕೊಟ್ಟಾಯಂನಲ್ಲಿ ಮಾಂಸಾಹಾರ ಸೇವಿಸಿ ದಾದಿಯೊಬ್ಬರು ಮೃತಪಟ್ಟ ಬಳಿಕ, ಸ್ವಚ್ಛತೆ ಕಾಪಾಡದೇ ನಡೆಸುತ್ತಿರುವ ಹೋಟೆಲ್‌ಗಳ ಮೇಲೆ ಅಧಿಕಾರಿಗಳು ಕಠಿಣ ಕ್ರಮ ಜರುಗಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.