ADVERTISEMENT

ಜನರ ಮನ ಗೆದ್ದ ಸುಷ್ಮಾ ಟ್ವೀಟ್ ಯಾವುದು ಗೊತ್ತಾ?

ವಿದೇಶಾಂಗ ಸಚಿವೆಗೆ ಟ್ವಿಟರ್‌ನಲ್ಲಿ ಮೆಚ್ಚುಗೆಯ ಸುರಿಮಳೆ

ಏಜೆನ್ಸೀಸ್
Published 7 ಆಗಸ್ಟ್ 2019, 4:50 IST
Last Updated 7 ಆಗಸ್ಟ್ 2019, 4:50 IST
   

ನವದೆಹಲಿ:ಟ್ವಿಟರ್‌ ಮೂಲಕ ಸದಾ ಜನರ ಸಮಸ್ಯೆಗಳಿಗೆ ಸ್ಪಂದಿಸುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಈಗ ಮತ್ತೆ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದಕ್ಕೆ ಕಾರಣ, ತಪ್ಪು-ತಪ್ಪುಇಂಗ್ಲಿಷ್‌ನಲ್ಲಿ ಸಹಾಯ ಯಾಚಿಸಿ ಟ್ರೋಲ್‌ಗೆ ಗುರಿಯಾದ ವ್ಯಕ್ತಿಯೊಬ್ಬರನ್ನು ಸಮರ್ಥಿಸಿ ಸಹಾಯಕ್ಕೆ ಮುಂದಾಗಿರುವುದು.

‘ಅಸ್ವಸ್ಥ ಸ್ನೇಹಿತನನ್ನು ಭಾರತಕ್ಕೆ ಕಳುಹಿಸಲು ಸಮಸ್ಯೆ ಎದುರಾಗಿದೆ, ನೆರವು ನೀಡಿ’ ಎಂದು ಪಂಜಾಬ್ ಮೂಲದ, ಸದ್ಯ ಮಲೇಷ್ಯಾದಲ್ಲಿರುವ ‘ಗೇವಿ’ ಎಂಬ ವ್ಯಕ್ತಿ ಸುಷ್ಮಾರನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದರು. ಇಂಗ್ಲಿಷ್‌ನಲ್ಲಿ ಮಾಡಲಾಗಿರುವ ಈ ಟ್ವೀಟ್ ವ್ಯಾಕರಣದೋಷದಿಂದ ಕೂಡಿತ್ತು. ಇದಕ್ಕೆ ಹಲವರು‘ಗೇವಿ’ ಅವರನ್ನು ಟ್ರೋಲ್ ಮಾಡಿದ್ದರು.

‘ಅಣ್ಣಾ, ಹಿಂದಿ ಅಥವಾ ಪಂಜಾಬಿ ಭಾಷೆಯಲ್ಲಿ ಬರೆಯಬಹುದಲ್ಲಾ’ ಎಂದು ಸೌರಭ್ ದಾಸ್ ಎಂಬುವವರು ಟ್ವೀಟ್ ಮಾಡಿದ್ದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಸುಷ್ಮಾ ಸ್ವರಾಜ್, ‘ಅರದಲ್ಲೇನೂ ಸಮಸ್ಯೆ ಇಲ್ಲ. ವಿದೇಶಾಂಗ ಸಚಿವೆಯಾದ ನಂತರ ನಾನು ಎಲ್ಲ ರೀತಿಯ ಉಚ್ಛಾರ, ವ್ಯಾಕರಣದ ಇಂಗ್ಲಿಷ್‌ ಅರ್ಥಮಾಡಿಕೊಳ್ಳಲು ಕಲಿತಿದ್ದೇನೆ’ ಎಂದು ಟ್ವೀಟ್ ಮಾಡಿದ್ದಾರೆ. ಸುಷ್ಮಾ ಅವರ ಈ ನಡೆಯನ್ನು ಅನೇಕರು ಟ್ವಿಟರ್‌ನಲ್ಲಿ ಕೊಂಡಾಡಿದ್ದಾರೆ.

‘ನಿಮಗೆ ಹ್ಯಾಟ್ಸ್‌ಆಫ್‌ ಮೇಡಂ. ನೀವು ಒಳ್ಳೆಯವರು. ಭಾರತ ಮತ್ತು ಭಾರತೀಯರಿಗೆ ನಿಮ್ಮ ಬಗ್ಗೆ ಹೆಮ್ಮೆ ಇದೆ’ ಎಂದು ಸಂಜಯ್ ಚೌಧರಿ ಎಂಬುವವರು ಟ್ವೀಟ್ ಮಾಡಿದ್ದಾರೆ.

‘ಮೇಡಂ, ನೀವೊಬ್ಬರು ದಂತಕಥೆಯಂತೆ. ನೀವು ಯಾವಾಗಲೂ ಹಾಗೆಯೇ. ವಿದೇಶಾಂಗ ಸಚಿವೆಯಾಗಿ ನಿಮ್ಮ ಇಡೀ ಅವಧಿ ಅದ್ಭುತವಾದದ್ದು’ ಎಂದು ದಿ ಕಾನ್ಸ್‌ಟೆಂಟೈನ್ ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿದೆ. ‘ನೀವೊಬ್ಬರು ಜೀವಂತ ದಂತಕಥೆ’, ‘ಅದ್ಭುತ ಮಹಿಳೆ’... ಹೀಗೆ ಹಲವು ರೀತಿಯಲ್ಲಿ ಟ್ವೀಟ್‌ ಮೂಲಕ ಸುಷ್ಮಾರನ್ನು ಜನ ಹೊಗಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.