ADVERTISEMENT

ಭಯೋತ್ಪಾದಕರಿದ್ದಾರೆ ಎಂದು ಹಾಸ್ಯ: ವಿಮಾನ ಪ್ರಯಾಣಿಕ ವಶಕ್ಕೆ

ಮುಂಬೈಗೆ ಹೊರಟಿದ್ದ ಜೆಟ್‌ ಏರ್‌ವೇಸ್

ಪಿಟಿಐ
Published 26 ನವೆಂಬರ್ 2018, 20:21 IST
Last Updated 26 ನವೆಂಬರ್ 2018, 20:21 IST
   

ಕೋಲ್ಕತ್ತ: ಕೋಲ್ಕತ್ತದಿಂದ ಮುಂಬೈಗೆ ಪ್ರಯಾಣ ಬೆಳೆಸಬೇಕಿದ್ದ ಜೆಟ್‌ ಏರ್‌ವೇಸ್‌ ವಿಮಾನದಲ್ಲಿ ಭಯೋತ್ಪಾದಕರಿದ್ದಾರೆ ಎಂದು ‘ಹಾಸ್ಯ’ ಮಾಡಿದಪ್ರಯಾಣಿಕನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ವಿಮಾನವನ್ನು ಮತ್ತೊಮ್ಮೆ ಸಂಪೂರ್ಣ ತಪಾಸಣೆಗೆ ಒಳಪಡಿಸಿ, ಬಳಿಕ ಹಾರಾಟಕ್ಕೆ ಅನುಮತಿ ನೀಡಲಾಯಿತು. ವಿಮಾನ ಟೇಕ್‌ ಆಫ್‌ ಆಗಲು ಒಂದು ತಾಸು ವಿಳಂಬವಾಯಿತು’ ಎಂದು ವಿಮಾನ ನಿಲ್ದಾಣ ಪ್ರಾಧಿಕಾರದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಯೋಗವೇದಾಂತ್ ಪೊದ್ದಾರ್ (21) ತನ್ನ ಮುಖ ಮರೆಮಾಚಿಕೊಂಡು ‘ವಿಮಾನದಲ್ಲಿ ಭಯೋತ್ಪಾದಕರಿದ್ದಾರೆ. ನಾನು ಮಹಿಳೆಯರ ಮನಸ್ಸು ಹಾಳುಮಾಡುತ್ತೇನೆ’ ಎಂದು ಫೋನ್‌ನಲ್ಲಿ ಸಂದೇಶ ಟೈಪ್ ಮಾಡುತ್ತಿದ್ದ. ಪೊದ್ದಾರ್ ಸೀಟಿನ ಹಿಂಭಾಗದಲ್ಲಿದ್ದ ಸಹಪ್ರಯಾಣಿಕ ಬೆಂಜಮಿನ್ ಪ್ಲಾಕೆಟ್‌ ಇದನ್ನು ಗಮನಿಸಿ ವಿಮಾನದ ಕ್ಯಾಪ್ಟನ್‌ಗೆ ವಿಷಯ ತಿಳಿಸಿದ್ದಾರೆ.

ADVERTISEMENT

ಕ್ಯಾಪ್ಟನ್‌ ಈ ವಿಷಯವನ್ನು ಜೆಟ್‌ ಏರ್‌ವೇಸ್ ನಿರ್ವಾಹಕರಿಗೆ ರವಾನಿಸಿದ ನಂತರ, ಭದ್ರತಾ ಪಡೆ ಅಧಿಕಾರಿಗಳು ಪೊದ್ದಾರ್‌ನನ್ನು ವಶಕ್ಕೆ ಪಡೆದು ಆತನ ಲಗೇಜ್‌ಗಳನ್ನು ಪರಿಶೀಲಿಸಿದ್ದಾರೆ.

‘ಯಾವುದೇ ಅನುಮಾನಾಸ್ಪದ ಅಥವಾ ಆಕ್ಷೇಪಾರ್ಹ ವಸ್ತುಗಳು ಆತನ ಬಳಿ ಪತ್ತೆಯಾಗಿಲ್ಲ. ಭಯೋತ್ಪಾದಕರ ಕುರಿತು ಸ್ನೇಹಿತರ ಬಳಿ ಹಾಸ್ಯ ಮಾಡುತ್ತಿದ್ದೆ ಎಂದು ವಿಚಾರಣೆ ವೇಳೆ ಆತ ತಿಳಿಸಿದ್ದಾನೆ’ ಎಂದು ವಿಮಾನ ನಿಲ್ದಾಣಗಳಿಗೆ ಭದ್ರತೆ ಒದಗಿಸುವ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ತಿಳಿಸಿದೆ.

ಕೋಲ್ಕತ್ತದ ಬೇಲಘಾಟ್ ನಿವಾಸಿಯಾಗಿರುವ ಈತನನ್ನುಹೆಚ್ಚಿನ ವಿಚಾರಣೆಗಾಗಿ ನೇತಾಜಿ ಸುಭಾಷ್‌ಚಂದ್ರ ಬೋಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ‍ಪೊಲೀಸರ ವಶಕ್ಕೆ ನೀಡಲಾಗಿದೆ ಎಂದು ಸಿಐಎಸ್‌ಎಫ್‌ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.