ADVERTISEMENT

ದೆಹಲಿ: ಇಟ್ಟಿಗೆ ಎಸೆದು ವ್ಯಕ್ತಿಯ ಪ್ರಾಣ ತೆಗೆದ ಕೋತಿ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಅಕ್ಟೋಬರ್ 2021, 11:54 IST
Last Updated 21 ಅಕ್ಟೋಬರ್ 2021, 11:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕಟ್ಟಡದ ಮೇಲಿಂದ ಕೋತಿಯೊಂದು ಎಸೆದ ಕಲ್ಲು ವ್ಯಕ್ತಿಯೊಬ್ಬರ ಪ್ರಾಣ ತೆಗೆದಿದೆ.

30 ವರ್ಷದ ಮೊಹಮ್ಮದ್ ಕುರ್ಬಾನ್ ಎಂಬುವವರ ತಲೆಯ ಮೇಲೆ ಕೋತಿ ಎಸೆದ ಇಟ್ಟಿಗೆ ಬಿದ್ದಿದ್ದು, ಆತ ಮೃತಪಟ್ಟಿರುವ ಘಟನೆ ದೆಹಲಿಯ ನಬಿ ಕರೀಮ್ ಪ್ರದೇಶದಲ್ಲಿ ನಡೆದಿದೆ.

ಕಟ್ಟಡದ ಮೇಲೆ ಕುಳಿತಿದ್ದ ಕೋತಿಯೊಂದು ಎರಡನೇ ಮಹಡಿಯಿಂದ ಇಟ್ಟಿಗೆಯನ್ನು ಎಸೆದಿದೆ. ಅದು ಕೆಳಗೆ ನಿಂತಿದ್ದ ಕುರ್ಬಾನ್‌ ಅವರ ತಲೆ ಮೇಲೆ ಬಿದ್ದಿದೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಯಿತು. ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.

ADVERTISEMENT

‘ಕಟ್ಟಡದ ಮೇಲಿದ್ದ ನೀರಿನ ಟ್ಯಾಂಕ್‌ನ ಮುಚ್ಚಳವನ್ನು ಕೋತಿಗಳು ತೆರೆಯಬಾರದು ಎಂದು ಮಾಲೀಕರು ಅದರ ಮೇಲೆ ಎರಡು ಇಟ್ಟಿಗೆಗಳನ್ನು ಇಟ್ಟಿದ್ದರು. ಕೋತಿಯೊಂದು ಆ ಇಟ್ಟಿಗೆಗಳನ್ನು ಪಕ್ಕಕ್ಕೆ ಸರಿಸಲು ಪ್ರಯತ್ನಿಸಿದೆ. ಆದರೆ, ದುರಾದೃಷ್ಟವಶಾತ್ ಕೋತಿಯ ಕೈಯಿಂದ ಇಟ್ಟಿಗೆಯೊಂದು ಜಾರಿ ಕೆಳಗೆ ಬಿದ್ದಿದೆ. ಆ ಇಟ್ಟಿಗೆ ಕಟ್ಟಡದ ಕೆಳ ಭಾಗದಲ್ಲಿ ನಿಂತಿದ್ದ ಕುರ್ಬಾನ್ ಅವರ ತಲೆ ಮೇಲೆ ಬಿದ್ದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಕಟ್ಟಡದ ಮಾಲೀಕರು ಸೇರಿದಂತೆ ಸ್ಥಳೀಯರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.