ಪ್ರಾತಿನಿಧಿಕ ಚಿತ್ರ
ರೋಹ್ಟಕ್: ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಶಂಕೆ ಮೇರೆಗೆ ಯೋಗ ಶಿಕ್ಷಕನನ್ನು ವ್ಯಕ್ತಿಯೊಬ್ಬ 7 ಅಡಿ ಗುಂಡಿಯಲ್ಲಿ ಹಾಕಿ ಜೀವಂತವಾಗಿ ಸಮಾಧಿ ಮಾಡಿದ ಘಟನೆ ಹರಿಯಾಣದ ರೋಹ್ಟಕ್‌ನಲ್ಲಿ ನಡೆದಿದೆ.
2024ರ ಡಿಸೆಂಬರ್‌ನಲ್ಲಿ ಘಟನೆ ನಡೆದಿದ್ದು, ಶವವನ್ನು 2025ರ ಮಾರ್ಚ್ 24ರಂದು ಪೊಲೀಸರು ಹೊರತೆಗೆದಿದ್ದಾರೆ.
ಜಗದೀಪ್ ಹತ್ಯೆಯಾದ ಯೋಗ ಶಿಕ್ಷಕ.
ಹರ್ದೀಪ್ ಎನ್ನುವಾತ ಪತ್ನಿಯೊಂದಿಗೆ ವಾಸವಿದ್ದ ಮನೆಯ ಪಕ್ಕದಲ್ಲೇ ಜಗದೀಪ್ ವಾಸವಿದ್ದ. ಜಗದೀಪ್ ರೋಹ್ಟಕ್‌ನ ವಿಶ್ವವಿದ್ಯಾಲಯದಲ್ಲಿ ಯೋಗ ಶಿಕ್ಷಕ ಎಂದು ಹೇಳಿಕೊಂಡಿದ್ದ. ಈತ ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಇರಿಸಿಕೊಂಡಿರುವುದನ್ನು ತಿಳಿದ ಹರ್ದೀಪ್ ಕುಪಿತಗೊಂಡಿದ್ದ. ಕೆಲವು ಜನರಿಗೆ ಹಣ ನೀಡಿ ಪಂತವಾಸ್ ಎನ್ನುವ ಹಳ್ಳಿಯಲ್ಲಿ ಕೊಳವೆಬಾವಿ ಕೊರೆಸುವ ನೆಪವೊಡ್ಡಿ ಏಳು ಅಡಿಯ ಗುಂಡಿ ತೋಡಿಸಿದ್ದ.
ಡಿ.24ರಂದು ಜಗದೀಪ್ ಕೆಲಸದಿಂದ ಮನೆಗೆ ಮರಳುತ್ತಿದ್ದ ವೇಳೆ ಹರ್ದೀಪ್ ತನ್ನ ಸ್ನೇಹಿತರೊಂದಿಗೆ ಸೇರಿ ಜಗದೀಪ್‌ನ ಕೈಕಾಲು ಕಟ್ಟಿ ಅಪಹರಣ ಮಾಡಿದ್ದ. ಬಳಿಕ ಜಗದೀಪ್ ಕೂಗದಂತೆ ಬಾಯಿಗೆ ಬಟ್ಟೆ ತುಂಬಿ, ಗುಂಡಿಗೆ ಹಾಕಿ, ಮಣ್ಣುಮುಚ್ಚಿ ಜೀವಂತವಾಗಿ ಸಮಾಧಿ ಮಾಡಿದ್ದ ಎಂದು ಪೊಲೀಸರ ಮಾಹಿತಿ ನೀಡಿದ್ದಾರೆ.
ಸುದೀರ್ಘ ತನಿಖೆಯ ಬಳಿಕ ಪ್ರಕರಣ ಬೆಳಕಿಗೆ
ಜಗದೀಪ್ ಹತ್ಯೆಯಾದ 10 ದಿನಗಳ ಬಳಿಕ 2025ರ ಜ.3ರಂದು ರೋಹ್ಟಕ್‌ನ ಶಿವಾಜಿ ಕಾಲೋನಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಜಗದೀಪ್ ಫೋನ್ ಕರೆಗಳ ರೆಕಾರ್ಡ್‌ಗಳನ್ನು ಪರಿಶೀಲಿಸಿದ ಹಲವು ದಿನಗಳ ಬಳಿಕ ಹರ್ದೀಪ್ ಮತ್ತು ಆತನ ಸ್ನೇಹಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ತನಿಖೆಯ ವೇಳೆ ಹರ್ದೀಪ್ ಸ್ನೇಹಿತರು ಹತ್ಯೆಯ ಬಗ್ಗೆ ಬಾಯಿಬಿಟ್ಟಿದ್ದಾರೆ. ಅವರ ಹೇಳಿಕೆ ಆಧರಿಸಿ ಹತ್ಯೆಯಾದ ಮೂರು ತಿಂಗಳ ಬಳಿಕ ಮಾರ್ಚ್ 24ರಂದು ಶವವನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಪ್ರಕರಣದಲ್ಲಿ ಭಾಗಿಯಾದ ಇತರ ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸಲಾಗುವುದು. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯುತ್ತಿದ್ದೇವೆ ಎಂದು ತನಿಖಾ ಸಂಸ್ಥೆಯ ಉಸ್ತುವಾರಿ ಅಧಿಕಾರಿ ಕುಲದೀಪ್ ಸಿಂಗ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.