ADVERTISEMENT

ಈತ ’ಓಡಾಡುವ ಕಸದ ಬುಟ್ಟಿ’; ಪಾಲಿಥಿನ್‌ ಬಳಕೆ ನಿಲ್ಲಿಸುವುದೇ ಗುರಿ

ಏಜೆನ್ಸೀಸ್
Published 1 ಡಿಸೆಂಬರ್ 2018, 20:15 IST
Last Updated 1 ಡಿಸೆಂಬರ್ 2018, 20:15 IST
   

ಮಯೂರ್‌ಭಂಜ್‌(ಒಡಿಶಾ): ಈತನಿಗೆ ನಿತ್ಯವೂ ಬಣ್ಣ ಬಣ್ಣದ ಪಾಲಿಥಿನ್‌ ಬ್ಯಾಗ್‌ಗಳೇ ಉಡುಗೆ. ಪ್ಲಾಸ್ಟಿಕ್ ಧರಿಸಿ ಊರು ಸುತ್ತುವ ಈತನಿಗೆ ‘ಓಡಾಡುವ ಕಸದ ಬುಟ್ಟಿ’(ಚಲ್ತೇ ಫಿರ್ತಾ ಡಸ್ಟ್‌ಬಿನ್‌) ಎಂದೇ ಅಡ್ಡ ನಾಮ. ಪರಿಸರ ಜಾಗೃತಿ ಮೂಡಿಸುವುದೇ ಈತನ ನಿತ್ಯ ಕಾಯಕ.

ಪಾಲಿಥಿನ್‌ ಬ್ಯಾಗ್‌ಗಳನ್ನು ದೇಹಕ್ಕೆ ಸುತ್ತಿಕೊಂಡು, ಪ್ಲಾಸ್ಟಿಕ್‌ ಬಾಟಲಿಗಳ ಹಾರ, ಕಿರೀಟ ತೊಟ್ಟು ಒಡಿಶಾದ ರಸ್ತೆಗಳಲ್ಲಿ ಓಡಾಡುವ ಬಿಶ್ಣು ಭಗತ್‌(36)ನನ್ನು ಕಂಡು ನಗುವವರೇ ಹೆಚ್ಚು. ‘ನಾನು ನಿಮಗೆ ಅಸಹ್ಯವಾಗಿ ಕಾಣುತ್ತಿರುವುದಾದರೆ, ನಮ್ಮ ಭೂಮಿಯ ಬಗ್ಗೆ ಯೋಚಿಸಿ; ನಾವು ಇದನ್ನು ಏನು ಮಾಡಿದ್ದೇವೆಂದು’ –ಇದು ಭಗತ್‌ ನಗುವವರಿಗೆ ನೀಡುತ್ತಿರುವ ಉತ್ತರ.

’ಭವಿಷ್ಯ ಉಳಿಸಿ’, 'ಪಾಲಿಥಿನ್ ಬ್ಯಾಗ್‌ಗಳ ಬಳಕೆ ನಿಲ್ಲಿಸಿ' ಎಂಬ ಸಂದೇಶಗಳನ್ನು ಬಟ್ಟೆಗೆ ಅಂಟಿಸಿಕೊಂಡು ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಪಾಲಿಥಿನ್‌ ಬಳಕೆಯಿಂದ ಪರಿಸರಕ್ಕೆ ಆಗುವ ಹಾನಿಯ ಬಗ್ಗೆ ವಿವರಿಸುತ್ತಿದ್ದಾರೆ.

ADVERTISEMENT

’ಪಾಲಿಥಿನ್‌ ಬ್ಯಾಗ್‌ನಲ್ಲಿ ಸುತ್ತಿ ಬಿಸಾಡಿದ್ದ ಆಹಾರ ಪದಾರ್ಥವನ್ನು ತಿನ್ನುತ್ತಿದ್ದ ಹಸುವೊಂದು ಕಣ್ಣಿಗೆ ಬಿತ್ತು. ಅದು ಆಹಾರದೊಂದಿಗೆ ಪಾಲಿಥಿನ್‌ ಕೂಡ ನುಂಗುತ್ತಿತ್ತು. ಕೆಲವೇ ದಿನಗಳಲ್ಲಿ ಆ ಹಸು ಸತ್ತು ಬಿದ್ದಿತ್ತು. ಈ ಘಟನೆ ನನ್ನ ಮನಕಲಕಿತು, ಅವತ್ತಿನಿಂದಲೇ ಪರಿಸರ ಹಾಗೂ ಪ್ರಾಣಿಗಳ ಉಳಿವಿಗೆ ನನ್ನಿಂದ ಆಗಬಹುದಾದ ಕಾರ್ಯ ಮಾಡಲು ನಿರ್ಧರಿಸಿದೆ’ ಎನ್ನುತ್ತಾರೆ ಬಾರಿಪದಾ ನಿವಾಸಿ ಭಗತ್‌.

ಶಾಲಾ ವಿದ್ಯಾರ್ಥಿನಿ ಸಂಜನಾ ಈ ಜಾಗೃತಿ ಅಭಿಯಾನದಿಂದ ಪ್ರೇರಿತರಾಗಿ ಪಾಲಿಥಿನ್‌ ಬಳಕೆಯನ್ನು ನಿಲ್ಲಿಸಿದ್ದು, ತನ್ನ ಸ್ನೇಹಿತರು ಹಾಗೂ ಕುಟುಂಬ ವರ್ಗದವರಿಗೂ ಪಾಲಿಥಿನ್‌ ಬಳಕೆ ನಿಲ್ಲಿಸುವಂತೆಯೂ ತಿಳಿಸಿರುವುದಾಗಿ ಹೇಳಿದ್ದಾಳೆ. ವಿಶೇಷವಾಗಿ ಉಡುಗೆ ತೊಟ್ಟು ಮಕ್ಕಳೊಂದಿಗೆ ಬೆರೆತು, ಪಾಲಿಥಿನ್‌ ಬಗೆಗೆ ಅವರಿಗೆ ವಿವರಿಸುವುದನ್ನು ಕೇಳುತ್ತಿದ್ದಾರೆ. ಜನರನ್ನು ಸೆಳೆದು ಜಾಗೃತಿ ಮೂಡಿಸಲು ಇದೊಂದು ವಿಶಿಷ್ಟವಾದ ಯೋಚನೆ ಎನ್ನುತ್ತಾರೆ ಮಯೂರ್‌ಭಂಜ್‌ ಶಾಲೆಯ ಪ್ರಾಂಶುಪಾಲ ಅಲೋಕ್‌ ದತ್ತ.

ಜಿಲ್ಲೆಯಲ್ಲಿ ಇದೊಂದು ಸಾಮೂಹಿಕ ಅಭಿಯಾನವಾಗಿ ಸ್ವೀಕರಿಸಿ ಪರಿಸರದ ಉಳಿವಿಗೆ ಜನರು ಕಾಳಜಿವಹಿಸುವಂತೆ ಜಿಲ್ಲಾಡಳಿತ ಸಹ ಮನವಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.