ADVERTISEMENT

ಬ್ಯಾಂಕಿನ ಗೋಡೆಗೆ ರಂಧ್ರ ಕೊರೆದು ₹ 55 ಲಕ್ಷ ಲೂಟಿ: ಇಬ್ಬರ ಬಂಧನ

ಪಿಟಿಐ
Published 22 ಜೂನ್ 2021, 16:03 IST
Last Updated 22 ಜೂನ್ 2021, 16:03 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಪೂರ್ವ ದೆಹಲಿಯ ಫಾರ್ಶ್ ಬಜಾರ್ ಪ್ರದೇಶದ ಪಕ್ಕದ ನಿರ್ಮಾಣ ಹಂತದಲ್ಲಿರುವ ಕಟ್ಟಡದಿಂದ ಬ್ಯಾಂಕ್‌ಗೆ ನುಗ್ಗಿ ₹ 55 ಲಕ್ಷ ಕಳ್ಳತನ ಮಾಡಿದ್ದಕ್ಕಾಗಿ 34 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಆರೋಪಿಯ ಬಗ್ಗೆ ತಿಳಿಯದೆ, ಬ್ಯಾಂಕ್ ಅಧಿಕಾರಿಗಳು ಈ ಹಿಂದೆ ತಮ್ಮ ಆವರಣದೊಳಗಿನ ಗೋಡೆಯ ರಂಧ್ರವನ್ನು ಸರಿಪಡಿಸುವ ಕೆಲಸವನ್ನು ಅವನಿಗೇ ವಹಿಸಿಕೊಟ್ಟಿದ್ದರು.

ತನ್ನ ಗುರುತನ್ನು ಮರೆಮಾಡಲು ಕಳ್ಳತನದ ಸಮಯದಲ್ಲಿ ಆರೋಪಿ ಹೆಲ್ಮೆಟ್ ಧರಿಸಿದ್ದ ಎಂದು ಅವರು ಹೇಳಿದ್ದಾರೆ.

ADVERTISEMENT

ಕದ್ದ ಹಣದಲ್ಲಿ ಸ್ವಲ್ಪ ಹಣವನ್ನು ಪಡೆದ ಇನ್ನೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರು ಆರೋಪಿಗಳನ್ನು ವಿಶ್ರಾಸ್ ನಗರದ ನಿವಾಸಿಗಳಾದ ಹರಿರಾಮ್ ಮತ್ತು ಕಾಲಿಚರಣ್ (39) ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದರು.

ಸೋಮವಾರ ಬೆಳಿಗ್ಗೆ 10.15 ರ ಸುಮಾರಿಗೆ ವಿಶ್ವಾಸ್ ನಗರ ಪ್ರದೇಶದ ಬ್ಯಾಂಕಿನಲ್ಲಿ ನಡೆದ ಕಳ್ಳತನದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ.

ಸ್ಥಳ ಪರಿಶೀಲನೆ ನಡೆಸಿದ ಪೊಲೀಸರಿಗೆ, ಪಕ್ಕದ ನಿರ್ಮಾಣ ಹಂತದಲ್ಲಿರುವ ಕಟ್ಟಡದಿಂದ ಬ್ಯಾಂಕಿನ ಸರ್ವರ್ ಕೋಣೆಯ ಗೋಡೆಯಲ್ಲಿ ರಂಧ್ರವನ್ನು ಮಾಡಲಾಗಿದೆ ಎಂದು ತಿಳಿದುಬಂದಿದೆ. ನೆಲಮಾಳಿಗೆಯಲ್ಲಿರುವ ಬಲವಾದ ಕೋಣೆಯ ಗೋಡೆಯಲ್ಲಿ ಮತ್ತೊಂದು ರಂಧ್ರವನ್ನು ಮಾಡಲಾಗಿದ್ದು, ₹ 55,03,330 ಹಣವನ್ನು ಗೋಡೆಯಿಂದ ಕಳವು ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

50 ಕ್ಕೂ ಹೆಚ್ಚು ಸಿಸಿಟಿವಿಗಳನ್ನು ಪರಿಶೀಲಿಸಿದ ನಂತರ, ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಕಡೆ ಎಟಿಎಂ ಬಳಿ ಸ್ಥಾಪಿಸಲಾದ ಒಂದು ಕ್ಯಾಮೆರಾ ಮೇಲ್ಮುಖವಾಗಿರುವುದು ಕಂಡುಬಂದಿದೆ. ಸಿಸಿಟಿವಿ ಹಾಳಾಗಿರುವುದು ಗಮನಕ್ಕೆ ಬಂದಿದೆ. ಮನುಷ್ಯನ ಅಂಗೈ ಮತ್ತು ಅವನ ಮುಖದ ಕೆಲವು ಭಾಗಗಳು ಕೆಲವು ಮೈಕ್ರೊ ಸೆಕೆಂಡುಗಳ ಕಾಲ ಕ್ಯಾಮೆರಾದಲ್ಲಿ ಸೆರೆಸಿಕ್ಕಿದ್ದವು ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ಲೀಡ್ ಮೂಲಕ ತನಿಖೆ ಮುಂದುವರಿಸಿದಾಗ, ಕಟ್ಟಡದ ಮೊದಲ ಮಹಡಿಯಿಂದ ಕ್ಯಾಮೆರಾವನ್ನು ಹಾಳು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಸಿಸಿಟಿವಿಯ ದಿಕ್ಕನ್ನು ನಿರ್ಮಾಣ ಹಂತದಲ್ಲಿರುವ ಕಟ್ಟಡದ ಪ್ರವೇಶ ಬಿಂದುವಿನ ಕಡೆಗೆ ತಿರುಗಿಸಲಾದ ಸಮಯದಲ್ಲಿ ಕಟ್ಟಡದಲ್ಲಿ ಇದ್ದರೆನ್ನಲಾದ ಮೂವರು ಪ್ರಧಾನ ಶಂಕಿತರನ್ನು ಪೊಲೀಸರು ಬಂಧಿಸಿದ್ದರು.

ದೃಶ್ಯದಲ್ಲಿರುವ ವ್ಯಕ್ತಿಯು ಹತ್ತಿರದ ಬೀದಿಯಲ್ಲಿ ವಾಸಿಸುವ ಹರಿರಾಮ್ ಎಂದುಸಿಸಿಟಿವಿ ದೃಶ್ಯಾವಳಿಗಳ ವಿವರವಾದ ವಿಶ್ಲೇಷಣೆ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಹೊಂದಿರುವ ಕಟ್ಟಡದ ಉಸ್ತುವಾರಿಗಳಿಂದ ತಿಳಿದುಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

‘ನಂತರ, ಹರಿರಾಮ್‌ನನ್ನು ವಿಚಾರಣೆಯ ಸಮಯದಲ್ಲಿ ಬಂಧಿಸಲಾಗಿದೆ. ಒಬ್ಬ ವ್ಯಕ್ತಿಯು ಕ್ಯಾಮೆರಾದ ದಿಕ್ಕನ್ನು ತಿರುಗಿಸಲು ₹1,000 ಗಳನ್ನು ಕೊಟ್ಟಿದ್ದಾನೆ ಎಂದು ಹೇಳುವ ಮೂಲಕ ಪೊಲೀಸರನ್ನು ದಾರಿ ತಪ್ಪಿಸಲು ಆತ ಪ್ರಯತ್ನಿಸಿದ್ದಾನೆ. ಆದರೆ, ಬಳಿಕ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.’ ಎಂದು ಉಪ ಪೊಲೀಸ್ ಆಯುಕ್ತ (ಶಹದಾರಾ) ಆರ್ ಸತ್ಯಸುಂದರಂ ಹೇಳಿದ್ದಾರೆ .

ಆರು ತಿಂಗಳ ಹಿಂದೆ ಸ್ಟ್ರಾಂಗ್ ರೂಮಿನಲ್ಲಿ ನವೀಕರಣ ಕಾರ್ಯಕ್ಕಾಗಿ ಆತನನ್ನು ಬ್ಯಾಂಕಿಗೆ ಕರೆಸಲಾಗಿತ್ತು. ನವೀಕರಣದ ಸಮಯದಲ್ಲಿ, ಅವನು ಸ್ಥಳದ ವಿವರವಾದ ಪರಿಶೀಲನೆ ನಡೆಸಿದ್ದು, ನಗದು, ಪ್ರವೇಶ ಮತ್ತು ನಿರ್ಗಮನ ಮಾರ್ಗಗಳ ಬಗ್ಗೆ ಎಲ್ಲ ಮಾಹಿತಿಯನ್ನು ಸಂಗ್ರಹಿಸಿದ್ದಾನೆ ಎಂದು ಡಿಸಿಪಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.