ADVERTISEMENT

ಕ್ರಿಪ್ಟೋ ವಂಚನೆ : ಮುಂಬೈ ಪೊಲೀಸರಿಂದ ಬೆಂಗಳೂರಿನಲ್ಲಿ ಆರೋಪಿ ಬಂಧನ

ಪಿಟಿಐ
Published 22 ಫೆಬ್ರುವರಿ 2022, 14:44 IST
Last Updated 22 ಫೆಬ್ರುವರಿ 2022, 14:44 IST
   

ಮುಂಬೈ: ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭ ತಂದುಕೊಡುವ ಭರವಸೆ ನೀಡಿ ಸಂಗೀತ ಶಿಕ್ಷಕರೊಬ್ಬರಿಂದ ₹2.43 ಲಕ್ಷ ಪಡೆದು ವಂಚಿಸಿದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಬೆಂಗಳೂರಿನಲ್ಲಿ ಬಂಧಿಸಿರುವುದಾಗಿ ಮುಂಬೈ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಬೆಂಗಳೂರಿನ ರೆಸ್ಟೋರೆಂಟ್‌ವೊಂದರ ಡೆಲಿವರಿ ಬಾಯ್‌ ಮೊಹಮ್ಮದ್‌ ಜಾಬಿರ್‌ ಮೊಹಮ್ಮದ್‌ ನೂರುದ್ದೀನ್‌ ಬಂಧಿತ ಆರೋಪಿ.

ಶಿಕ್ಷಕ ಪಾವತಿಸಿದ್ದ ಹಣವು ಮೊಹಮ್ಮದ್‌ ಜಾಬಿರ್‌ನ ಖಾತೆಗೆ ಜಮೆಯಾಗಿತ್ತು ಎಂಬುದು ತನಿಖೆಯಿಂದ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ಕ್ರಿಪ್ಟೋ ಮೈನಿಂಗ್‌ ಮೂಲಕ ಪ್ರತಿದಿನ ₹2ಸಾವಿರ ಗಳಿಸಬಹುದು ಎಂಬ ಸಂದೇಶ ‘ಅರ್ಗೊಹಾಶ್‌’ ಎಂಬ ಆ್ಯಪ್‌ನಿಂದ ಮೊಬೈಲ್‌ಗೆ ಬಂದಿತ್ತು. ಅದನ್ನು ನಂಬಿ ಅದರಲ್ಲಿದ್ದ ಲಿಂಕ್‌ ಮೂಲಕ ಆ್ಯಪ್‌ ಡೌನ್‌ಲೋಡ್‌ ಮಾಡಿ ಹಣ ಪಾವತಿಸಿದ್ದೇನೆ. ಸ್ಪಲ್ಪ ಸಮಯದ ಬಳಿಕ ಆ ಆ್ಯಪ್‌ ಕೆಲಸ ನಿರ್ವಹಿಸುವುದನ್ನು ನಿಲ್ಲಿಸಿತ್ತು. ಅನಂತರ ‘ಆರ್ಗೊ ಪ್ರೊ’ ಎಂಬ ಹೆಸರಿನಲ್ಲಿ ಅದು ಕಾರ್ಯಾಚರಿಸಲು ಆರಂಭಿಸಿತ್ತು. ಆಗ ವಂಚನೆಗೊಳಗಾಗಿರುವುದು ಅರಿವಿಗೆ ಬಂತು’ ಎಂದು ಸಂಗೀತ ಶಿಕ್ಷಕ ಮುಂಬೈನ ಮಾಟುಂಗ ಪೊಲೀಸ್‌ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಫೆಬ್ರುವರಿ 9,10 ಮತ್ತು 11ರಂದು ಮೊಹಮ್ಮದ್‌ ಜಾಬಿರ್‌ನ ಖಾತೆಗೆ ವಿವಿಧ ಮೂಲಗಳಿಂದ ₹71 ಲಕ್ಷ ಹಣ ಜಮೆಯಾಗಿತ್ತು. ಈತನ ಖಾತೆಯಿಂದ ತಕ್ಷಣ ಹಿಂಪಡೆಯಲಾಗುತ್ತಿದ್ದ ಹಣ ದೆಹಲಿ ಮೂಲದ ಕಂಪನಿಯೊಂದಕ್ಕೆ ಜಮಾವಣೆಗೊಳ್ಳುತ್ತಿತ್ತು. ಕಂಪನಿ ಈ ರೀತಿ ₹225 ಕೋಟಿ ಸಂಗ್ರಹಿಸಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.