ADVERTISEMENT

ಉನ್ನಾವೊ: ಮಹಾಭಾರತ ಕಾಲದ್ದು ಎನ್ನಲಾದ ಪುರಾತನ ಶಿವಲಿಂಗ ಧ್ವಂಸ; ಒಬ್ಬನ ಸೆರೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2025, 11:21 IST
Last Updated 8 ಜನವರಿ 2025, 11:21 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಉನ್ನಾವೊ: ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯ ಪುರಾತನ ಬಿಲ್ಲೇಶ್ವರ ಮಹಾದೇವ ದೇವಾಲಯದ ಶಿವಲಿಂಗವನ್ನು ಧ್ವಂಸ ಮಾಡಲಾಗಿದ್ದು, ಪ್ರಕರಣ ಸಂಬಂಧ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಪೂರ್ವ–ಮೌರಾವಾನ್ ರಸ್ತೆಯ ಪೂರ್ವ ಕೊತ್ವಾಲಿಯಲ್ಲಿರುವ ಈ ದೇಗುಲದಲ್ಲಿ ದುಷ್ಕೃತ್ಯ ಕಂಡು ಸ್ಥಳೀಯರು ಪ್ರತಿಭಟನೆ ನಡೆಸಿದರು. ಬಂಧಿತ ವ್ಯಕ್ತಿ ಖಿನ್ನತೆಯಿಂದ ಬಳಲುತ್ತಿದ್ದ ಎಂದು ತಿಳಿದುಬಂದಿದೆ.

ADVERTISEMENT

ಬಂಧಿತನನ್ನು ಅವದೇಶ್ ಕುರ್ಮಿ ಎಂದು ಗುರುತಿಸಲಾಗಿದ್ದು, ಅಮೊನೌ ಖೇರಾ ಹಳ್ಳಿಯ ನಿವಾಸಿ. ಪತ್ನಿಯ ದೀರ್ಘ ಕಾಲದ ಅನಾರೋಗ್ಯದಿಂದ ಈತ ತೀವ್ರ ಬೇಸತ್ತಿದ್ದ ಎಂದು ಎಎಸ್‌ಪಿ ಅಖಿಲೇಶ್ ಸಿಂಗ್ ಹೇಳಿದ್ದಾರೆ. ಸಮೀಪದ ಮತ್ತೊಂದು ಶಿವಲಿಂಗವನ್ನೂ ಧ್ವಂಸ ಮಾಡಿರುವುದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ.

ಕೃತ್ಯವನ್ನು ಖಂಡಿಸಿರುವ ಹಿಂದೂ ಜಾಗರಣ್ ಮಂಚ್‌ನ ಅಜಯ್ ತ್ರಿವೇದಿ, ಶಿವಲಿಂಗವನ್ನು ಭಿನ್ನಗೊಳಿಸಿರುವುದು ನಮ್ಮ ಧಾರ್ಮಿಕ ಭಾವನೆಗೆ ತೀವ್ರ ಧಕ್ಕೆ ತಂದಿದೆ ಎಂದಿದ್ದಾರೆ.

ಮಹಾಭಾರತದ ಕಾಲದಲ್ಲಿ ಪ್ರತಿಷ್ಠಾಪನೆ ಆಗಿರುವ ಈ ಶಿವಲಿಂಗ ಐತಿಹಾಸಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆ ಪಡೆದಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಮಹಾಭಾರತದ ಕಾಲದಲ್ಲಿ ಹಸ್ತಿನಾಪುರದಿಂದ ಪ್ರಯಾಣಕ್ಕೆ ಹೊರಟಿದ್ದ ಭಗವಂತ ಕೃಷ್ಣ ಮತ್ತು ಅರ್ಜುನ ಇಲ್ಲಿ ತಂಗಿದ್ದರು ಎಂಬ ನಂಬಿಕೆ ಇದೆ. ಶ್ರೀಕೃಷ್ಣನು ಈ ದೇಗುಲದಲ್ಲಿ ಲಿಂಗ ಪ್ರತಿಷ್ಠಾಪಿಸಿ ಪೂಜಿಸಿದನು. ಅರ್ಜುನನು ಬಾಣ ಹೂಡಿ ಭೂಮಿಯಿಂದ ಗಂಗೆಯನ್ನು ಅಭಿಷೇಕಕ್ಕೆ ಕರೆತಂದನು. ಈಗಲೂ ಆ ಕಲ್ಯಾಣಿ ನೀರನ್ನೇ ದೇಗುಲದಲ್ಲಿ ಬಳಸಲಾಗುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.

ಬಿಲ್ಲೇಶ್ವರ ಮಹಾದೇವ ದೇವಾಲಯವು ಭಕ್ತಾಧಿಗಳಿಗೆ ಅತ್ಯಂತ ವಿಶೇಷ ಧಾರ್ಮಿಕ ಕೇಂದ್ರವಾಗಿದೆ. ಇಲ್ಲಿನ ಕಲ್ಯಾಣಿಯಲ್ಲಿ ಸ್ನಾನ ಮಾಡಿದರೆ ಸಕಲ ಪಾಪಗಳೂ ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.