ಸಾಂದರ್ಭಿಕ ಚಿತ್ರ
(ಎಐ ಚಿತ್ರ)
ಅಗರ್ತಲಾ: ಮೇಘಾಲಯದಲ್ಲಿ ಇತ್ತೀಚೆಗೆ ನಡೆದ 'ಹನಿಮೂನ್ ಹತ್ಯೆ' ಪ್ರಕರಣದ ಬೆನ್ನಲೇ ನೆರೆಯ ತ್ರಿಪುರದಲ್ಲಿ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 26 ವರ್ಷದ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಶವವನ್ನು ಐಸ್ ಕ್ರೀಮ್ ಫ್ರೀಜರ್‌ನಲ್ಲಿ ಇಟ್ಟಿರುವ ಘಟನೆ ನಡೆದಿದೆ. ಕೊಲೆಗೆ ತ್ರಿಕೋನ ಪ್ರೇಮವೇ ಕಾರಣ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಶರಿಫುಲ್ ಇಸ್ಲಾಂ ಕೊಲೆಯಾದ ವ್ಯಕ್ತಿ. ಈತ 20 ವರ್ಷದ ಯುವತಿಯೊಂದಿಗೆ ಸಂಬಂಧ ಹೊಂದಿದ್ದ. ಮತ್ತೊಂದೆಡೆ, ಯುವತಿಯ ಸೋದರ ಸಂಬಂಧಿ (ದಿವಾಕರ್ ಸಹಾ) ಆಕೆಗೆ ಹತ್ತಿರವಾಗಲು ಬಯಸಿದ್ದ. ಇತ್ತೀಚೆಗೆ ಇಬ್ಬರ (ಶರಿಫುಲ್ ಮತ್ತು ಯುವತಿ) ನಡುವೆ ಜಗಳ ನಡೆದಿತ್ತು. ಇಬ್ಬರು ಮಾತನಾಡುತ್ತಿರಲಿಲ್ಲ. ಇದರ ಲಾಭ ಪಡೆದು, ಸೋದರಸಂಬಂಧಿ ಆತನನ್ನು ಕೊಲ್ಲಲು ಸಂಚು ರೂಪಿಸಿದ್ದ ಎಂದು ಪಶ್ಚಿಮ ತ್ರಿಪುರ ಎಸ್‌ಪಿ ಕಿರಣ್ ಕುಮಾರ್ ಹೇಳಿದ್ದಾರೆ.
ಎಂಬಿಬಿಎಸ್ ಪದವೀಧರನಾಗಿರುವ ಆರೋಪಿ, ಜೂನ್ 8ರಂದು ದಕ್ಷಿಣ ಇಂದಿರಾನಗರದಲ್ಲಿರುವ ಸಂಬಂಧಿಕರ ಮನೆಗೆ ಶರಿಫುಲ್‌ನನ್ನು ಆಹ್ವಾನಿಸಿದ್ದ. ಅಲ್ಲಿ ಇತರ ಮೂವರ ಸಹಾಯದಿಂದ ಆತನನ್ನು ಕತ್ತು ಹಿಸುಕಿ ಕೊಂದು ಶವವನ್ನು ಟ್ರಾಲಿ ಬ್ಯಾಗ್‌ನಲ್ಲಿ ತುಂಬಿದ್ದಾನೆ. ಮರುದಿನ ಗಂದಚೆರಾದಲ್ಲಿ ವಾಸವಿದ್ದ ತನ್ನ ಪೋಷಕರಿಗೆ ಕರೆ ಮಾಡಿ ಅಗರ್ತಲಾಕ್ಕೆ ಬಂದು ಟ್ರಾಲಿ ಬ್ಯಾಗ್ ತೆಗೆದುಕೊಂಡು ಹೋಗುವಂತೆ ಹೇಳಿದ್ದಾನೆ.
ಕಾರಿನಲ್ಲಿ ಅಗರ್ತಲಾಕ್ಕೆ ಬಂದ ಪೋಷಕರು, ಟ್ರಾಲಿ ಬ್ಯಾಗ್ ಅನ್ನು ಗಂದಚೆರಾಗೆ ತೆಗೆದುಕೊಂಡು ಬಂದಿದ್ದಾರೆ. ಬಳಿಕ ಶವವನ್ನು ತಮ್ಮ ಅಂಗಡಿಯಲ್ಲಿನ ಐಸ್ ಕ್ರೀಮ್ ಫ್ರೀಜರ್‌ನಲ್ಲಿ ಬಚ್ಚಿಟ್ಟಿದ್ದಾರೆ ಎಂದು ಎಸ್‌ಪಿ ಮಾಹಿತಿ ನೀಡಿದ್ದಾರೆ.
ಯುವತಿ ಇತ್ತೀಚೆಗೆ ತಂದೆಯನ್ನು ಕಳೆದುಕೊಂಡಿದ್ದಳು. ಆಕೆಗೆ ಹತ್ತಿರವಾಗಲು ಆರೋಪಿ ಬಯಸಿದ್ದ. ಶರಿಫುಲ್ ಆಕೆಯ ಜೊತೆಗೆ ಇರುವವರೆಗೆ ಅದು ಅಸಾಧ್ಯ ಎಂದು ಅರಿತ ಆತ ಅವನನ್ನು ಕೊಲ್ಲಲು ಸಂಚು ರೂಪಿಸಿದ್ದ. ಆರೋಪಿಯು ಪೂರ್ವ ಅಗರ್ತಲಾ ಪೊಲೀಸ್ ಠಾಣೆ ವ್ಯಾಪ್ತಿಯ ಬಂಕುಮರಿಯಲ್ಲಿರುವ ಯುವತಿಯ ಮನೆಗೆ ಆಗಾಗ ಭೇಟಿ ನೀಡುತ್ತಿದ್ದ ಎಂದೂ ಅವರು ಹೇಳಿದ್ದಾರೆ.
ಶರಿಫುಲ್ ನಾಪತ್ತೆಯಾಗಿದ್ದಾನೆ ಎಂದು ಕುಟುಂಬಸ್ಥರು ದೂರು ನೀಡಿದ್ದರು. ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ಮೊದಲು ಯುವತಿಯ ಸೋದರ ಸಂಬಂಧಿಯನ್ನು ಬಂಧಿಸಿದ್ದರು.
ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಬುಧವಾರ ಶವವನ್ನು ಫ್ರೀಜರ್‌ನಿಂದ ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಪ್ರಕರಣ ಸಂಬಂಧ ಪ್ರಮುಖ ಆರೋಪಿ ಮತ್ತು ಆತನ ಪೋಷಕರು ಸೇರಿದಂತೆ 6 ಜನರನ್ನು ಬಂಧಿಸಲಾಗಿದೆ ಎಂದು ಕಿರಣ್ ಕುಮಾರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.