ADVERTISEMENT

ವಿಚ್ಛೇದನ ನೀಡದೆ ಪರಸ್ತ್ರೀ ಜತೆ ವಾಸ ಸಹಜೀವನ ಅಲ್ಲ: ಪಂಜಾಬ್- ಹರಿಯಾಣ ಹೈಕೋರ್ಟ್

ಪಿಟಿಐ
Published 15 ನವೆಂಬರ್ 2023, 16:33 IST
Last Updated 15 ನವೆಂಬರ್ 2023, 16:33 IST
Venugopala K.
   Venugopala K.

ಚಂಡೀಗಢ: ಪತಿಯು ತನ್ನ ಪತ್ನಿಗೆ ವಿಚ್ಛೇದನ ನೀಡದೆಯೇ, ಪರ ಸ್ತ್ರೀ ಜೊತೆ ‘ಸ್ವೇಚ್ಛೆಯಿಂದ ಕೂಡಿದ ಮತ್ತು ವಿವಾಹೇತರ ಸಂಬಂಧ’ ಹೊಂದಿದ್ದಲ್ಲಿ, ಅವರಿಬ್ಬರ ಸಂಬಂಧವನ್ನು ‘ಸಹಜೀವನ’ ಅಥವಾ ‘ವಿವಾಹದಂತಹ ಸಂಬಂಧ’ ಎಂಬುದಾಗಿ ಕರೆಯುವಂತಿಲ್ಲ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ತಮ್ಮ ಬದುಕು ಮತ್ತು ಸ್ವಾತಂತ್ರ್ಯದ ರಕ್ಷಣೆ ಕೋರಿ ಪಂಜಾಬ್‌ನ ಜೋಡಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕುಲದೀಪ್ ತಿವಾರಿ ಅವರಿದ್ದ ಏಕಸದಸ್ಯ ಪೀಠ ವಜಾಗೊಳಿಸಿದೆ.

ತಮ್ಮ ಸಹಜೀವನ ಸಂಬಂಧದಿಂದ ಆಕ್ರೋಶಗೊಂಡಿರುವ ಮಹಿಳೆಯ ಕುಟುಂಬದ ಸದಸ್ಯರು ತಮಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು  ಅರ್ಜಿದಾರರು ತಿಳಿಸಿದ್ದಾರೆ.

ADVERTISEMENT

ಸಹ ಜೀವನ ನಡೆಸುತ್ತಿರುವ ಮಹಿಳೆ ಅವಿವಾಹಿತರಾಗಿದ್ದಾರೆ, ಆದರೆ ಪುರುಷ ವಿವಾಹಿತ. ಸಂಬಂಧ ಹಳಸಿದ ಕಾರಣ ಪತ್ನಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಅವರು ತಮ್ಮ ತಾಯಿಯೊಂದಿಗೆ ವಾಸಿಸುತ್ತಿದ್ದಾರೆ ಎಂಬುದನ್ನು ವಿಚಾರಣೆ ವೇಳೆ ಪೀಠ ಗಮನಿಸಿದೆ.

‘ಸಂಗಾತಿಯಿಂದ ವಿಚ್ಛೇದನ ಪಡೆಯದೆ, ಪರಸ್ತ್ರೀ ಜತೆ ವಿವಾಹೇತರ ಸಂಬಂಧ ಹೊಂದಿದ್ದಾರೆ. ಇದು ಐಪಿಸಿ ಸೆಕ್ಷನ್ 494/495ರ ಅಡಿ ಶಿಕ್ಷಾರ್ಹ ಅಪರಾಧವಾಗಬಹುದು. ಏಕೆಂದರೆ ಅಂತಹ ಸಂಬಂಧವು ಮದುವೆಯ ಸ್ವರೂಪದಲ್ಲಿ 'ಸಹಜೀವನ' ಅಥವಾ 'ವಿವಾಹದಂತಹ ಸಂಬಂಧ' ಎಂಬ ಪದಗುಚ್ಛದೊಳಗೆ ಬರುವುದಿಲ್ಲ’ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

ತಮ್ಮ ವಿವಾಹೇತರ ಸಂಬಂಧದ ವಿರುದ್ಧ ಕೈಗೊಳ್ಳಬಹುದಾದ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಕೋರ್ಟ್‌ನ ಮುಖಾಂತರ ರಕ್ಷಣೆ ಪಡೆಯುವ ಉದ್ದೇಶ ಇದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. 

ಅರ್ಜಿದಾರರಿಗೆ ಪರಿಹಾರ ನೀಡಲು ಯಾವುದೇ ಸ್ಪಷ್ಟ ಕಾರಣ ಇಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿರುವುದಾಗಿ ಹೇಳಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.