ADVERTISEMENT

ಮಹಾರಾಷ್ಟ್ರ ಸೆಕ್ರಟರಿಯಟ್‌ಗೆ ಹುಸಿ ಬಾಂಬ್‌ ಬೆದರಿಕೆ: ವ್ಯಕ್ತಿ ಬಂಧನ

ಪಿಟಿಐ
Published 22 ಜೂನ್ 2021, 10:12 IST
Last Updated 22 ಜೂನ್ 2021, 10:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ತನ್ನ ಮಗುವಿಗೆ ಶಾಲೆಯಲ್ಲಿ ಪ್ರವೇಶ ಸಿಗದ ಕಾರಣ ಅಸಮಾಧಾನಗೊಂಡ ವ್ಯಕ್ತಿಯೊಬ್ಬ ‘ಸ್ಟೇಟ್ ಸೆಕ್ರಟರಿಯಟ್‌ಗೆ‘ ಬಾಂಬ್‌ ಇಟ್ಟಿರುವುದಾಗಿ ಮಹಾರಾಷ್ಟ್ರ ಸರ್ಕಾರಕ್ಕೆ ಇ–ಮೇಲ್‌ ಕಳಿಸಿದ್ದಾನೆ. ಈ ಕುರಿತು ತನಿಖೆ ನಡೆಸಿದ ಪೊಲೀಸರಿಗೆ ಇದೊಂದು ಹುಸಿ ಕರೆ ಎಂದು ಗೊತ್ತಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿ ಪುಣೆಯ ಘೋರ್ಪಾಡಿ ಪ್ರದೇಶದ ನಿವಾಸಿ ಶೈಲೇಶ್ ಶಿಂಧೆ (53). ಈತ ತನ್ನ ಮಗುವಿಗೆ ಶಾಲೆಯಲ್ಲಿ ಪ್ರವೇಶ ಸಿಗಲಿಲ್ಲ ಎಂಬ ಕಾರಣಕ್ಕೆ ಅಸಮಾಧಾನಗೊಂಡು, ಆ ಶಾಲೆಯ ವಿರುದ್ಧ ಮುಖ್ಯಮಂತ್ರಿ ಕಚೇರಿ ಮತ್ತು ಕೆಲವು ಇಲಾಖೆಗಳಿಗೆ ಕೆಲವು ಇ-ಮೇಲ್‌ಗಳನ್ನು ಕಳಿಸಿದ್ದರು. ಆದರೆ, ಯಾವ ಇ–ಮೇಲ್‌ಗೂ ಪ್ರತಿಕ್ರಿಯೆ ಬಾರದ ಕಾರಣ, ಶಿಂಧೆ, ‘ಸ್ಟೇಟ್‌ ಸೆಕ್ರೆಟರಿಯೆಟ್‌’ಗೆ ಬಾಂಬ್ ಇಟ್ಟಿರುವುದಾಗಿ ಮುಖ್ಯಮಂತ್ರಿ ಕಚೇರಿಗೆ ಬೆದರಿಕೆಯ ಮೇಲ್ ಮಾಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆತನ ಇ–ಮೇಲ್‌ ಗಮನಿಸಿದ ಅಧಿಕಾರಿಗಳು, ಪೊಲೀಸರಿಗೆ ಮಾಹಿತಿ ತಿಳಿಸಿದರು. ತಕ್ಷಣ ಬಾಂಬ್‌ ಪತ್ತೆ ಮತ್ತು ನಿಷ್ಕ್ರಿಯ ದಳದವರು ಸ್ಟೇಟ್‌ ಸೆಕ್ರಟರಿಯಟ್‌ ಕಚೇರಿಗೆ ಧಾವಿಸಿ, ಶೋಧ ಕೈಗೊಂಡರು. ಆದರೆ, ಅಲ್ಲಿ ಅನುಮಾನ ಪಡುವಂತಹ ಯಾವುದೇ ವಸ್ತುಗಳು ಸಿಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪ್ರಕರಣದ ತನಿಖೆ ಕೈಗೊಂಡಾಗ, ಇ–ಮೇಲ್ ಪುಣೆಯಿಂದ ಬಂದಿರುವುದು ಗೊತ್ತಾಯಿತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಶಿಂಧೆಯನ್ನು ಬಂಧಿಸಿ, ಮುಂಬೈಗೆ ಕರೆತಂದು ವಿಚಾರಣೆ ನಡೆಸಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಮರೀನಾ ಡ್ರೈವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.