ರಾಹುಲ್ ಕುಮಾರ್
ಚಿತ್ರಕೃಪೆ: ಎಕ್ಸ್
ದರ್ಭಾಂಗಾ: ಬಿಹಾರದ ದರ್ಭಾಂಗಾದಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ 25 ವರ್ಷದ ವ್ಯಕ್ತಿಯೊಬ್ಬನನ್ನು ಆತನ ಮಾವನೇ ಗುಂಡಿಕ್ಕಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಹುಲ್ ಕುಮಾರ್ ಹತ್ಯೆಯಾದ ವ್ಯಕ್ತಿ. ದರ್ಭಾಂಗಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಇವರು ವ್ಯಾಸಂಗ ಮಾಡುತ್ತಿದ್ದರು. ನಾಲ್ಕು ತಿಂಗಳ ಹಿಂದಷ್ಟೇ ಅದೇ ಕಾಲೇಜಿನ ವಿದ್ಯಾರ್ಥಿನಿ ತನ್ನು ಪ್ರಿಯಾ ಅವರನ್ನು ಆಕೆಯ ಕುಟುಂಬದ ವಿರೋಧದ ನಡುವೆಯೇ ರಾಹುಲ್ ವಿವಾಹವಾಗಿದ್ದರು.
ಹತ್ಯೆಯ ಬೆನ್ನಲ್ಲೇ ರಾಹುಲ್‌ನ ಸಹಪಾಠಿಗಳು ತನ್ನುವಿನ ತಂದೆ ಆರೋಪಿ ಪ್ರೇಮ್‌ಶಂಕರ್ ಝಾ ಅವರನ್ನು ಥಳಿಸಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ನಿನ್ನೆ ಸಂಜೆ ಹೂಡಿ ಧರಿಸಿದ್ದ ವ್ಯಕ್ತಿಯೊಬ್ಬ ರಾಹುಲ್ ಬಳಿಗೆ ಬಂದಿದ್ದರು. ಹತ್ತಿರ ಬಂದಾಗ ಅದು ನನ್ನ ತಂದೆ ಎಂದು ತಿಳಿಯಿತು. ಅವರು ಬಂದೂಕು ಹಿಡಿದುಕೊಂಡಿದ್ದರು. ನನ್ನ ಕಣ್ಣೆದುರೇ ನನ್ನ ಗಂಡನ ಎದೆಗೆ ಗುಂಡು ಹಾರಿಸಿದರು. ನನ್ನ ಗಂಡ ನನ್ನ ಮಡಿಲಲ್ಲಿ ಪ್ರಾಣ ಬಿಟ್ಟರು’ ಎಂದು ತನ್ನು ಪ್ರಿಯಾ ಕಣ್ಣೀರು ಸುರಿಸಿದ್ದಾರೆ.
‘ನನ್ನ ಇಡೀ ಕುಟುಂಬ ಈ ಪಿತೂರಿಯಲ್ಲಿ ಭಾಗಿಯಾಗಿದೆ. ನನ್ನ ಸಹೋದರ ಮತ್ತು ತಂದೆಯಿಂದ ನಮ್ಮ ಜೀವಕ್ಕೆ ಬೆದರಿಕೆಯಿದೆ ಎಂದು ದೂರು ನೀಡಿ ನ್ಯಾಯಾಲಯಕ್ಕೂ ಹೋಗಿದ್ದೆವು’ ಎಂದು ತಿಳಿಸಿದ್ದಾರೆ.
ಮೇಲ್ನೋಟಕ್ಕೆ ಇದು ಮರ್ಯಾದೆಗೇಡು ಹತ್ಯೆ ಎಂದು ತಿಳಿದುಬಂದಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.