ADVERTISEMENT

ಛತ್ತೀಸಗಡ: 12 ಗಂಟೆ ಮರದಲ್ಲೇ ಕುಳಿತು ಜೀವ ಉಳಿಸಿಕೊಂಡ ವ್ಯಕ್ತಿ!

ಪಿಟಿಐ
Published 17 ಆಗಸ್ಟ್ 2020, 14:24 IST
Last Updated 17 ಆಗಸ್ಟ್ 2020, 14:24 IST
ಜಿತೇಂದರ್‌ ಕಶ್ಯಪ್‌ ಅವರನ್ನು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ ನೆರವಿನಿಂದ ಸೋಮವಾರ ರಕ್ಷಿಸಲಾಯಿತು– ಪಿಟಿಐ ಚಿತ್ರ 
ಜಿತೇಂದರ್‌ ಕಶ್ಯಪ್‌ ಅವರನ್ನು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ ನೆರವಿನಿಂದ ಸೋಮವಾರ ರಕ್ಷಿಸಲಾಯಿತು– ಪಿಟಿಐ ಚಿತ್ರ    

ಬಿಲಾಸಪುರ, ಛತ್ತೀಸಗಡ : ಜಲಾಶಯದಿಂದ ಬಿಡುಗಡೆಯಾದ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದ ವ್ಯಕ್ತಿಯೊಬ್ಬ ಸುಮಾರು 12 ಗಂಟೆಗಳ ಕಾಲ ಮರದಲ್ಲೇ ಕುಳಿತು ಜೀವ ಉಳಿಸಿಕೊಂಡಿದ್ದಾನೆ.

43 ವರ್ಷ ವಯಸ್ಸಿನ ಜಿತೇಂದರ್‌ ಕಶ್ಯಪ್‌ ಅವರನ್ನು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ ನೆರವಿನಿಂದ ಸೋಮವಾರ ರಕ್ಷಿಸಲಾಗಿದೆ.

‘ಖುತಘಾಟ್‌ ಜಲಾಶಯದಿಂದ ಭಾನುವಾರ ಸಂಜೆ ಹೆಚ್ಚುವರಿ ನೀರು ಬಿಡುಗಡೆ ಮಾಡಿದ್ದ ವೇಳೆ ಜಿತೇಂದರ್‌ ಅವರು ಅಣೆಕಟ್ಟೆಯಿಂದ ಕೆಳಕ್ಕೆ ಜಿಗಿದಿದ್ದರು. ನೀರಿನ ಸೆಳೆತಕ್ಕೆ ಸಿಲುಕಿದ್ದ ಅವರು ಸಣ್ಣ ಬಂಡೆಯ ನೆರವಿನಿಂದ ಮೇಲೆ ಬಂದಿದ್ದಾರೆ. ಬಳಿಕ ಅಲ್ಲೇ ಇದ್ದ ಮರ ಏರಿ ಕುಳಿತಿದ್ದಾರೆ. ರಾತ್ರಿಯೆಲ್ಲಾ ಅಲ್ಲೇ ಇದ್ದು ಜೀವ ಉಳಿಸಿಕೊಂಡಿದ್ದಾರೆ’ ಎಂದು ಬಿಲಾಸಪುರದ ಪೊಲೀಸ್‌ ವರಿಷ್ಠಾಧಿಕಾರಿ ಪ್ರಶಾಂತ್‌ ಅಗರವಾಲ್‌ ಹೇಳಿದ್ದಾರೆ.

ADVERTISEMENT

‘ವ್ಯಕ್ತಿಯೊಬ್ಬ ಅಪಾಯದಲ್ಲಿ ಸಿಲುಕಿರುವ ಮಾಹಿತಿ ಲಭ್ಯವಾಗುತ್ತಿದ್ದಂತೆ ಎಸ್‌ಡಿಆರ್‌ಎಫ್‌ ನೆರವಿನೊಂದಿಗೆ ತ್ವರಿತವಾಗಿ ರಕ್ಷಣಾ ಕಾರ್ಯ ಕೈಗೊಳ್ಳಲಾಯಿತು. ಸೌತ್‌ ಈಸ್ಟರ್ನ್‌ ಕೋಲ್‌ಫೀಲ್ಡ್‌ ಲಿಮಿಟೆಡ್‌ ಹಾಗೂ ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್‌ ನಿಗಮದ ತಂಡಗಳ ಸಿಬ್ಬಂದಿಯು ಈ ಕಾರ್ಯಕ್ಕೆ ಕೈಜೋಡಿಸಿದರು. ಹವಾಮಾನ ವೈಪರೀತ್ಯ ಹಾಗೂ ನೀರಿನ ರಭಸ ಹೆಚ್ಚಿದ್ದರಿಂದ ವ್ಯಕ್ತಿ ಇರುವ ಸ್ಥಳ ತಲುಪಲು ಆಗಲಿಲ್ಲ. ಹೀಗಾಗಿ ಕಾರ್ಯಾಚರಣೆ ನಿಲ್ಲಿಸಬೇಕಾಯಿತು. ಸೋಮವಾರವೂ ಇದೇ ಪರಿಸ್ಥಿತಿ ಮುಂದುವರಿಯಬಹುದೆಂಬ ಕಾರಣದಿಂದ ಐಎಎಫ್‌ ನೆರವು ಕೋರಲಾಯಿತು’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

‘ಸೋಮವಾರ ಬೆಳಿಗ್ಗೆ 5.49ಕ್ಕೆ ರಾಯಪುರದಿಂದ ಹೊರಟ ಎಂಐ–17 ಹೆಲಿಕಾಪ್ಟರ್‌ 6.37ಕ್ಕೆ ಜಿತೇಂದರ್ ಅವರನ್ನು ರಕ್ಷಿಸಿತು. ಸುಮಾರು 20 ನಿಮಿಷಗಳ ಕಾಲ ಕಾರ್ಯಾಚರಣೆ ನಡೆಯಿತು.ಜಿತೇಂದರ್ ಅವರನ್ನು ರಾಯಪುರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ’ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.