ADVERTISEMENT

‘ಭಾರತ ಟೀಕಿಸುವುದು ರಾಹುಲ್‌ಗೆ ಚಟ’: ’ನಿಮಗೆ ಸಚಿವ ಸ್ಥಾನ ನೀಡಿದವರೇ ಆರಂಭಿಸಿದ್ದು‘

ಜೈಶಂಕರ್–ಜೈರಾಮ್‌ರಮೇಶ್: ಮಾತಿನ ಏಟು–ಎದಿರೇಟು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಜೂನ್ 2023, 6:10 IST
Last Updated 9 ಜೂನ್ 2023, 6:10 IST
   

ನವದೆಹಲಿ: ‘ವಿದೇಶಗಳಲ್ಲಿ ಭಾರತವನ್ನು ಟೀಕಿಸುವುದನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಚಟವನ್ನಾಗಿ ಮಾಡಿಕೊಂಡಿದ್ದಾರೆ‘ ಎಂಬ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರ ಹೇಳಿಕೆಗೆ ಕಾಂಗ್ರೆಸ್ ನಾಯಕ ಜೈರಾಮ್‌ರಮೇಶ್ ತಿರುಗೇಟು ನಿಡಿದ್ದಾರೆ.

ದೆಹಲಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಜೈಶಂಕರ್, ’ಆಂತರಿಕ ರಾಜಕಾರಣವನ್ನು ದೇಶದ ಹೊರಗೆ ಚರ್ಚಿಸುವುದು ‘ದೇಶದ ಹಿತಾಸಕ್ತಿ’ ಎನಿಸಿಕೊಳ್ಳುವುದಿಲ್ಲ. ಅಮೆರಿಕ ಪ್ರವಾಸದಲ್ಲಿರುವ ರಾಹುಲ್‌ ಗಾಂಧಿ ಕೇಂದ್ರ ಸರ್ಕಾರವನ್ನು ಹಲವಾರು ಕಾರಣಗಳಿಗೆ ಟೀಕಿಸಿದ್ದಾರೆ. ಜಗತ್ತು ನಮ್ಮನ್ನು ಗಮನಿಸುತ್ತಿರುತ್ತದೆ’ ಎಂದಿದ್ದರು.

ಇದಕ್ಕೆ ತಿರುಗೇಟು ನೀಡಿರುವ ಜೈರಾಮ್‌ ರಮೇಶ್, ’ವಿದೇಶಿ ನೆಲದಲ್ಲಿ ನಿಂತು ಭಾರತವನ್ನು ಟೀಕಿಸುವುದನ್ನು ಮೊದಲು ಆರಂಭಿಸಿದವರು ನಿಮಗೆ ಸಚಿವ ಸ್ಥಾನ ನೀಡಿದವರೇ ಆಗಿದ್ದಾರೆ. ನಿಮಗೆ ಇವೆಲ್ಲವೂ ಗೊತ್ತು. ಆದರೆ ನೀವು ಅದನ್ನು ಬಹಿರಂಗವಾಗಿ ಹೇಳಲಾರಿರಿ ಡಾ. ಮಿನಿಸ್ಟರ್‘ ಎಂದು ಟ್ವಿಟರ್‌ನಲ್ಲಿ ಹೇಳಿದ್ದಾರೆ.

ADVERTISEMENT

ಇದೇ ವಿಷಯವಾಗಿ ರಣದೀಪ್‌ ಸಿಂಗ್ ಸುರ್ಜೆವಾಲಾ ಪ್ರತಿಕ್ರಿಯಿಸಿ, ’ವಿದೇಶಾಂಗ ಸಚಿವರಿಗೆ ಬಿಜೆಪಿ ಹಳೇ ಕಥೆಯನ್ನೇ ನೀಡಿದೆ. ಸಚಿವರು ಹೊಸತನ್ನು ಹೇಳುವುದನ್ನು ರೂಢಿಸಿಕೊಳ್ಳಬೇಕು‘ ಎಂದು ಕುಟುಕಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ’ಹಿಂದಿನ ಸರ್ಕಾರವನ್ನು ವಿದೇಶಿ ನೆಲದಲ್ಲಿ ನಿಂತು ಟೀಕಿಸುವುದನ್ನು ಆರಂಭಿಸಿದ್ದೇ ಈಗಿನ ಪ್ರಧಾನಿ. ರಾಹುಲ್ ಗಾಂಧಿ ಸತ್ಯವನ್ನೇ ಹೇಳಿದ್ದಾರೆ. ದೇಶದ ಸಂವಿಧಾನದ ಮೇಲೆ ನಿರಂತರವಾಗಿ ನಡೆಯುತ್ತಿರುವ ಯೋಜಿತ ಹಾಗೂ ವ್ಯವಸ್ಥಿತ ದಾಳಿಯನ್ನು ಹೇಳಿದ್ದಾರೆ‘ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.