ADVERTISEMENT

ತೆಲಂಗಾಣ: ಟ್ರಂಪ್‌ ಪ್ರತಿಮೆ ಸ್ಥಾಪಿಸಿ, ಪೂಜೆ ಸಲ್ಲಿಸಿದ ಅಭಿಮಾನಿ!

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 18:37 IST
Last Updated 19 ಜೂನ್ 2019, 18:37 IST

ಹೈದರಾಬಾದ್‌:ತೆಲಂಗಾಣ ರಾಜ್ಯದ ಜನಗಾಂ ಜಿಲ್ಲೆಯಲ್ಲಿ ರೈತರೊಬ್ಬರು ತಮ್ಮ ಮನೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಆರು ಅಡಿ ಎತ್ತರದ ಪ್ರತಿಮೆ ಸ್ಥಾಪಿಸಿ, ದೇವರಂತೆ ಅವರಿಗೆ ಪೂಜೆ ಸಲ್ಲಿಸುತ್ತಿದ್ದಾರೆ.

‘ಟ್ರಂಪ್‌ ಅವರ ಪ್ರಬಲ ನಾಯಕತ್ವ ಮತ್ತು ಧೈರ್ಯದ ವರ್ತನೆಗೆ ಮನಸೋತಿದ್ದೇನೆ. ಅವರ ಕಟ್ಟಾ ಅಭಿಮಾನಿಯಾಗಿದ್ದೇನೆ. ಮುಂದೆ ಒಂದು ದಿನ ಅವರನ್ನು ಭೇಟಿಯಾಗಬೇಕು ಎಂದುಕೊಂಡಿದ್ದೇನೆ’ ಎಂದು ಪ್ರತಿಮೆ ಸ್ಥಾಪಿಸಿರುವ ಕೊನ್ನೆ ಗ್ರಾಮದ 32 ವರ್ಷದ ರೈತ ಬುಸ್ಸಾ ಕೃಷ್ಣ ಹೇಳಿದ್ದಾರೆ.

ಪ್ರತಿಮೆಗೆ ಅಭಿಷೇಕ ಮಾಡಿ ಕುಂಕಮ ಹಚ್ಚಿ, ಹೂವಿನ ಹಾರ ಹಾಕಿ ಆರತಿ ಮಾಡಿ ‘ಜೈ ಜೈ ಟ್ರಂಪ್‌’ ಎಂದು ಘೋಷಣೆಯನ್ನು ಕೂಗಿದ್ದಾರೆ. ಜೂನ್‌ 14 ರಂದು ಟ್ರಂಪ್‌ ಅವರು 73ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದು, ಅಂದು ಕೃಷ್ಣ ಅವರು ತಮ್ಮ ಮನೆಯೆ ಹೊರಗೆ ಭಿತ್ತಿಪತ್ರ ಅಂಟಿಸಿ ಶುಭಾಶಯ ಕೋರಿದ್ದಾರೆ.

ADVERTISEMENT

‘ಪ್ರತಿಮೆಗಾಗಿ ಕೃಷ್ಣ ₹1.3 ಲಕ್ಷ ವೆಚ್ಚ ಮಾಡಿದ್ದಾನೆ’ ಎಂದು ಅವರ ತಾಯಿ ತಿಳಿಸಿದ್ದಾರೆ.

ಮುಂದಿನ ವಾರ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಭಾರತಕ್ಕೆ ಬರಲಿದ್ದಾರೆ. ವ್ಯಾಪಾರ ವಿಷಯಗಳ ಕುರಿತು ಚರ್ಚಿಸಲು ಅಮೆರಿಕ ಮುಕ್ತವಾಗಿದೆ. ಅಮೆರಿಕದ ಸಂಸ್ಥೆಗಳಿಗೆ ಸ್ಥಳೀಯ ಮಾರುಕಟ್ಟೆಗಳಲ್ಲಿ ವ್ಯಾಪಾರ–ವಹಿವಾಟಿಗೆ ಅವಕಾಶ ನೀಡಬೇಕು ಎಂದು ಅವರು ಇತ್ತೀಚೆಗೆ ಭಾರತವನ್ನು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.