ADVERTISEMENT

ಮೋದಿ ‘ನೀಚ ಮನುಷ್ಯ’ ಮಾತು ನೆನಪಿಸಿದ ಅಯ್ಯರ್

ಪ್ರಧಾನಿಯ ‘ಮೋಡದ ಮರೆಯಲ್ಲಿ ಬಾಲಾಕೋಟ್ ದಾಳಿ’ ಹೇಳಿಕೆಗೆ ಕಾಂಗ್ರೆಸ್‌ ನಾಯಕನ ಲೇವಡಿ

ಏಜೆನ್ಸೀಸ್
Published 14 ಮೇ 2019, 18:34 IST
Last Updated 14 ಮೇ 2019, 18:34 IST
   

ನವದೆಹಲಿ (ಪಿಟಿಐ):ಪ್ರಧಾನಿ ನರೇಂದ್ರ ಮೋದಿ ಅವರನ್ನು 2017ರ ಡಿಸೆಂಬರ್‌ 7ರಂದು ‘ನೀಚ ಮನುಷ್ಯ’ ಎಂದು ತಾವು ಕರೆದಿದ್ದನ್ನು ಕಾಂಗ್ರೆಸ್‌ ನಾಯಕ ಮಣಿಶಂಕರ್ ಅಯ್ಯರ್ ಈಗ ಸಮರ್ಥಿಸಿಕೊಂಡಿದ್ದಾರೆ. ಮಣಿಶಂಕರ್ ಅವರ ಈ ಸಮರ್ಥನೆಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

‘ರೈಸಿಂಗ್ ಕಾಶ್ಮೀರ್‌’ ಪತ್ರಿಕೆಯಲ್ಲಿ ಬರೆದಿರುವ ತಮ್ಮ ಲೇಖನದಲ್ಲಿ ಮಣಿಶಂಕರ್ ಅವರು ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.

‘ನರೇಂದ್ರ ಮೋದಿ ಅವರು ಜವಾಹರಲಾಲ್ ನೆಹರೂ ಬಗ್ಗೆ ಏಕೆ ಅಷ್ಟು ಸಿಟ್ಟು ವ್ಯಕ್ತಪಡಿಸುತ್ತಾರೆ ಎಂಬುದು ಗೊತ್ತಾಗಿದೆ. ಭಾರತದಲ್ಲಿನ ಮೂಢನಂಬಿಕೆಯನ್ನು ಹೋಗಲಾಡಿಸಿ, ವೈಜ್ಞಾನಿಕ ಮನೋಭಾವ ಬೆಳೆಸಲುನೆಹರೂ ಬಯಸಿದ್ದರು. ಆದರೆ ‘ವೈಜ್ಞಾನಿಕ ಮನೋಭಾವ’ ಎಂಬ ಪದ ಕೇಳಿದರೇ ‘ಸಂಘಿ’ಗಳಿಗೆ ಆಗುವುದಿಲ್ಲ. ಏಕೆಂದರೆ ಪುರಾಣದ ಪುಷ್ಪಕವಿಮಾನವೇ ಈಗಿನ ಎಫ್‌–16 ಯುದ್ಧವಿಮಾನ, ಅದನ್ನು ಹಿಂದೂಗಳೇ ಅಭಿವೃದ್ಧಿಪಡಿಸಿದ್ದು ಎಂದುಅವರು ನಂಬುತ್ತಾರೆ. ಹಿಂದೂಗಳಿಗೆ ಪ್ಲಾಸ್ಟಿಕ್ ಸರ್ಜರಿ ಗೊತ್ತಿತ್ತು. ಹೀಗಾಗಿಯೇ ಗಣೇಶನಿಗೆ ಆನೆಯ ತಲೆ ಜೋಡಿಸಿದ್ದರು (ಇದು ಅಂಗ ಕಸಿ ಆಗಬೇಕಿತ್ತಲ್ಲವೇ?) ಎಂದೂ ಅವರು ನಂಬುತ್ತಾರೆ. ಈ ಮಾತುಗಳು ಪ್ರಧಾನಿ ಮೋದಿಯದ್ದು’ ಎಂದು ಮಣಿಶಂಕರ್ ಬರೆದಿದ್ದಾರೆ.

ADVERTISEMENT

‘ಬಾಲಾಕೋಟ್‌ ದಾಳಿ ವೇಳೆ ತೀವ್ರ ಮೋಡ ಇದ್ದುದ್ದರಿಂದ, ಕಾರ್ಯಾಚರಣೆ ಮುಂದೂಡಿ ಎಂದು ವಾಯುಪಡೆ ಅಧಿಕಾರಿಗಳು ಪ್ರಧಾನಿ ಮೋದಿ ಎದುರು ಮಂಡಿಯೂರಿ ಕೋರುತ್ತಿದ್ದರಂತೆ. ಆಗ ಪ್ರಧಾನಿ, ಮೋಡಗಳು ಇರುವುದರಿಂದ ಪಾಕಿಸ್ತಾನದ ರೇಡಾರ್‌ಗಳುನಮ್ಮ ವಿಮಾನಗಳನ್ನು ಪತ್ತೆ ಮಾಡುವುದಿಲ್ಲ. ಹೀಗಾಗಿ ಕಾರ್ಯಾಚರಣೆ ನಡೆಸಿ ಎಂದರಂತೆ’ ಎಂದು ಅವರು ಹೇಳಿದ್ದಾರೆ.

‘ನಮ್ಮ ಯೋಧರ ಸಾಧನೆಗಳನ್ನು ತಮ್ಮದೆಂದು ಹೇಳಿಕೊಳ್ಳುವ ಮತ್ತು ತಮ್ಮ ಅಜ್ಞಾನದ ಮೂಲಕ ವಾಯುಪಡೆ ಸಿಬ್ಬಂದಿಯನ್ನು ಮುಟ್ಠಾಳರೆಂದು ಬಿಂಬಿಸುತ್ತಿರುವ ಮೋದಿಗೆ ಎಚ್ಚರಿಕೆ ರವಾನಿಸಬೇಕಿದೆ. ಮೇ 23ರಂದು ದೇಶದ ಜನರೇ ಮೋದಿಯನ್ನು ಅಧಿಕಾರದಿಂದ ಹೊರಗಟ್ಟುತ್ತಾರೆ. ಭಾರತ ಈವರೆಗೆ ಕಂಡಿರದ ಹೊಲಸು–ಬಾಯಿಯ ಪ್ರಧಾನಿಗೆ ಇದೇ ತಕ್ಕ ಅಂತ್ಯ. 2017ರ ಡಿಸೆಂಬರ್ 7ರಂದು ನಾನು ಇವರನ್ನು ಏನೆಂದು ಕರೆದಿದ್ದೆ ಎಂಬುದು ನಿಮಗೆ ನೆನಪಿದೆಯೇ’ ಎಂದು ಮಣಿಶಂಕರ್ ಪ್ರಶ್ನಿಸಿದ್ದಾರೆ.

2017ರ ಡಿಸೆಂಬರ್ 7ರಂದು ಮಣಿಶಂಕರ್ ಅವರು ಮೋದಿ ಅವರನ್ನು ‘ನೀಚ ಮನುಷ್ಯ’ ಎಂದು ಕರೆದಿದ್ದರು. ‘ಮೋದಿ ಅವರನ್ನು ಮಣಿಶಂಕರ್ ಅವರು ನೀಚ ಜಾತಿಯ ಮನುಷ್ಯ ಎಂದಿದ್ದಾರೆ’ ಎಂದು ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಮೋದಿ ಸಹ ತಮ್ಮ ಭಾಷಣಗಳಲ್ಲಿ ಈ ಟೀಕೆಯನ್ನು ಪ್ರಸ್ತಾಪಿಸುತ್ತಿದ್ದರು. ನಂತರಅವರನ್ನು ಕಾಂಗ್ರೆಸ್‌ ಪಕ್ಷವು ಅಮಾನತುಮಾಡಿತ್ತು. ‘ನನಗೆ ಹಿಂದಿ ಗೊತ್ತಿಲ್ಲ. ಈಪದವನ್ನು ಯಾವ ಅರ್ಥದಲ್ಲಿ ಬಳಸುತ್ತಾರೆ ಎಂಬುದು ಗೊತ್ತಿಲ್ಲ’ ಎಂದು ಮಣಿಶಂಕರ್ ತಮ್ಮ ಹೇಳಿಕೆಯನ್ನು ಆಗ ಸಮರ್ಥಿಸಿಕೊಂಡಿದ್ದರು.

2014ರ ಚುನಾವಣೆಗೂ ಮುನ್ನ ಮಣಿಶಂಕರ್ ಅವರು ಮೋದಿಅವರನ್ನು ‘ಚಾಯ್‌ವಾಲಾ’ ಎಂದುಕರೆದಿದ್ದರು.

ಪ್ರಧಾನಿ ಮಾತಿನಿಂದ ಮುಜುಗರ

‘ಪ್ರಧಾನಿ ಹುದ್ದೆಯನ್ನು ಅತ್ಯಂತ ಕೀಳುಮಟ್ಟಕ್ಕೆ ನಮ್ಮ ಇಂದಿನ ಪ್ರಧಾನಿ ತಂದಿದ್ದಾರೆ ಎಂಬುದನ್ನು ತಿಳಿದಾಗ ಮುಜುಗರವಾಗುತ್ತದೆ. ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅವರು, ‘ಮಿಶ್ರ ತಳಿಯ ಕರು’ ಎಂದಾಗ ಮುಜುಗರವಾಗಿದೆ. ಮಹಿಳೆಯರೊಬ್ಬರನ್ನು ಪ್ರಧಾನಿಯು ‘₹ 50 ಕೋಟಿಯ ಗರ್ಲ್‌ಫ್ರೆಂಡ್‌’ ಎಂದು ಕರೆದಾಗ ಮುಜುಗರವಾಗಿದೆ. ನಮ್ಮ ಈಗಿನ ಪ್ರಧಾನಿಯು ರಾಜೀವ್ ಗಾಂಧಿ ಅವರನ್ನು, ‘ಭ್ರಷ್ಟಾಚಾರಿ ನಂ.1’ ಎಂದು ಆರೋಪಿಸಿದಾಗ ಮುಜುಗರವಾಗಿದೆ’ ಎಂದು ಕಾಂಗ್ರೆಸ್‌ನ ವಕ್ತಾರ ಜಯವೀರ್ ಶೇರ್‌ಗಿಲ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಣಿಶಂಕರ್‌ ಅವರ ಹೇಳಿಕೆ ವೈಯಕ್ತಿಕ, ಅದಕ್ಕೂ ಪಕ್ಷಕ್ಕೂ ಸಂಬಂಧ ಇಲ್ಲ ಎಂದೂ ಕಾಂಗ್ರೆಸ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.