ಇಂಫಾಲ್: ರಾಜ್ಯದಲ್ಲಿ ಕಂಡುಬಂದ ಜನಾಂಗೀಯ ಸಂಘರ್ಷ ಕುರಿತಂತೆ ಮಣಿಪುರ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಮಂಗಳವಾರ ಕ್ಷಮೆ ಕೋರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಏನು ಸಂಭವಿಸಿದೆಯೋ ಅದಕ್ಕಾಗಿ ನಾನು ಕ್ಷಮೆ ಕೋರಲು ಬಯಸುತ್ತೇನೆ. ಹಲವರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದರೆ, ನೂರಾರು ಜನರು ತಮ್ಮ ಮನೆಗಳನ್ನು ತೊರೆಯಬೇಕಾಯಿತು' ಎಂದು ಹೇಳಿದ್ದಾರೆ.
‘ಎಲ್ಲ ಸಮುದಾಯಗಳು ಈ ಹಿಂದಿನ ತಪ್ಪುಗಳನ್ನು ಮರೆಯಬೇಕು ಹಾಗೂ ಕ್ಷಮಿಸಬೇಕು. ಶಾಂತ ಹಾಗೂ ಸಮೃದ್ಧ ಮಣಿಪುರದಲ್ಲಿ ಎಲ್ಲರೂ ಒಟ್ಟಾಗಿ ಬಾಳಬೇಕು’ ಎಂದು ಮನವಿ ಮಾಡಿದ್ದಾರೆ.
‘ಈ ಹಿಂದಿನ ದಿನಗಳಿಗೆ ಹೋಲಿಸಿದರೆ, ಇತ್ತೀಚಿನ 3–4 ತಿಂಗಳಿಂದ ರಾಜ್ಯದಲ್ಲಿ ಶಾಂತಿ ನೆಲಸಿದೆ. ಈ ಬೆಳವಣಿಗೆಯು ಹೊಸ ವರ್ಷದಲ್ಲಿ ರಾಜ್ಯದಲ್ಲಿ ಸಹಜಸ್ಥಿತಿ ಮರಳುವ ಭರವಸೆ ಮೂಡಿಸುತ್ತಿದೆ’ ಎಂದಿದ್ದಾರೆ.
ಕಳೆದ ಕೆಲ ತಿಂಗಳಿನಿಂದ ರಾಜ್ಯದಲ್ಲಿ ನಡೆಯುತ್ತಿರುವ ಜನಾಂಗೀಯ ಸಂಘರ್ಷದಲ್ಲಿ 250ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಸಾವಿರಾರು ಜನರು ಮನೆ ಕಳೆದುಕೊಂಡಿದ್ದಾರೆ.
ಬಿರೇನ್ ಸಿಂಗ್ ಹೇಳಿದ್ದು
* 2023ರ ಮೇನಲ್ಲಿ ಜನಾಂಗೀಯ ಸಂಘರ್ಷ ಆರಂಭಗೊಂಡ ನಂತರ ರಾಜ್ಯದಲ್ಲಿ ಗುಂಡಿನ ದಾಳಿ ಪ್ರಕರಣಗಳು ಹೆಚ್ಚಾಗಿದ್ದವು. ಆದರೆ, ಕಳೆದ 20 ತಿಂಗಳಲ್ಲಿ ಇಂತಹ ಘಟನೆಗಳು ಕಡಿಮೆಯಾಗಿವೆ
* 2023ರ ಮೇನಿಂದ ಅಕ್ಟೋಬರ್ ವರೆಗೆ 408 ಗುಂಡಿನ ದಾಳಿ ಪ್ರಕರಣಗಳು ವರದಿಯಾಗಿದ್ದವು. 2023ರ ನವೆಂಬರ್‌ನಿಂದ ಈ ವರ್ಷದ ಏಪ್ರಿಲ್ ನಡುವೆ 345 ಗುಂಡಿನ ದಾಳಿಗಳು ವರದಿಯಾಗಿದ್ದವು. 2024ರ ಮೇದಿಂದ ಈ ವರೆಗೆ 112 ಪ್ರಕರಣಗಳು ವರದಿಯಾಗಿವೆ
* ಶಸ್ತ್ರಾಸ್ತ್ರಗಳ ಲೂಟಿ ಪ್ರಕರಣಗಳಿಗೆ ಸಂಬಂಧಿಸಿ, 3,112 ಆಯುಧಗಳನ್ನು ಮರುವಶ ಮಾಡಿಕೊಳ್ಳಲಾಗಿದೆ. 2,511 ಸ್ಫೋಟಕಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ
* ಹಿಂಸಾಚಾರ ಪ್ರಕರಣಗಳಿಗೆ ಸಂಬಂಧಿಸಿ 625 ಜನರನ್ನು ಬಂಧಿಸಲಾಗಿದ್ದು, 12,047 ಎಫ್‌ಐಆರ್ ದಾಖಲಿಸಲಾಗಿದೆ
ರಾಜ್ಯದಲ್ಲಿ ಏನು ಘಟಿಸಿದೆಯೋ ಅದಕ್ಕಾಗಿ ನಾನು ಕ್ಷಮೆ ಕೇಳುವೆ ಹಾಗೂ ವಿಷಾದಿಸುವೆ.–ಎನ್.ಬಿರೇನ್ ಸಿಂಗ್, ಮುಖ್ಯಮಂತ್ರಿ
ಮೋದಿ ಈಗಲಾದರೂ ಕ್ಷಮೆ ಕೇಳಲಿ: ಕಾಂಗ್ರೆಸ್
ನವದೆಹಲಿ: ‘ಪ್ರಧಾನಿ ಮೋದಿ ಅವರು ಮಣಿಪುರಕ್ಕೆ ಭೇಟಿ ನೀಡದೆ, ಉದ್ದೇಶ ಪೂರ್ವಕವಾಗಿಯೇ ಕಡೆಗಣಿಸುತ್ತಾ ಬಂದಿದ್ದಾರೆ. ಅವರು ಹಲವುಬಾರಿ ರಾಷ್ಟ್ರ ಹಾಗೂ ವಿದೇಶ ಪ್ರವಾಸ ಮಾಡುತ್ತಿದ್ದರೂ, ಸಂಘರ್ಷ ಪೀಡಿತ ಮಣಿಪುರಕ್ಕೆ 2023ರ ಮೇ 4ರಿಂದ ಒಮ್ಮೆಯೂ ಭೇಟಿ ನೀಡಿಲ್ಲ. ಕನಿಷ್ಠ ಪಕ್ಷ ಈಗಲಾದರೂ ಮಣಿಪುರಕ್ಕೆ ತೆರಳಿ ಜನರ ಕ್ಷಮೆ ಕೇಳಬಾರದೇ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ‘ಎಕ್ಸ್’ನಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.