
ನವದೆಹಲಿ/ಇಂಫಾಲ್: ಹೂಡಿಕೆ ಯೋಜನೆ ಹೆಸರಿನಲ್ಲಿ ಸಾರ್ವಜನಿಕರಿಂದ ₹50 ಕೋಟಿಗೂ ಹೆಚ್ಚು ಹಣವನ್ನು ಸಂಗ್ರಹಿಸಿ ಭಾರತ ಸರ್ಕಾರದ ವಿರುದ್ಧ ಯುದ್ಧ ಸಾರಲು ಬಳಸಿಕೊಂಡ ಆರೋಪ ಹೊತ್ತಿರುವ ಕೆಲವು ವ್ಯಕ್ತಿಗಳ ವಿರುದ್ಧ ಹಣ ಅಕ್ರಮ ವರ್ಗಾವಣೆ ಆರೋಪದಡಿ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯವು (ಇ.ಡಿ) ಬುಧವಾರ ಮಣಿಪುರದಲ್ಲಿ ಶೋಧ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ರಾಜಧಾನಿ ಇಂಫಾಲ್‌ನಲ್ಲಿ ಐದು ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ಇವು ಮಣಿಪುರ ರಾಜ್ಯ ಪರಿಷತ್‌ನ ಸ್ವಯಂ ಘೋಷಿತ ಮುಖ್ಯಮಂತ್ರಿ ಯಂಬೆಮ್ ಬಿರೆನ್ ಮತ್ತು ಮಣಿಪುರ ರಾಜ್ಯ ಪರಿಷತ್‌ನ ಸ್ವಯಂ ಘೋಷಿತ ವಿದೇಶಾಂಗ ವ್ಯವಹಾರ ಮತ್ತು ರಕ್ಷಣಾ ಸಚಿವ ನರೆಂಗ್‌ಬಮ್ ಸಮರ್‌ಜಿತ್‌ಗೆ ಸಂಬಂಧಿಸಿದ ಸ್ಥಳವಾಗಿವೆ.
ಬಿರೆನ್ ಮತ್ತು ಸಮರ್‌ಜಿತ್ ಅವರು ಲಂಡನ್‌ನಲ್ಲಿ 2019ರ ವೇಳೆ ಪತ್ರಿಕಾಗೋಷ್ಠಿ ನಡೆಸಿ, ಭಾರತದ ಒಕ್ಕೂಟದಿಂದ ಮಣಿಪುರದ ಸ್ವಾತಂತ್ಯ್ರವನ್ನು ಘೋಷಿಸಿದ್ದ ಪ್ರಕರಣ ಇದಾಗಿದೆ. ಆರೋಪಿಗಳು ಸಲೈ ಗ್ರೂಪ್ ಆಫ್ ಕಂಪನಿಗಳ ಪ್ರಮುಖ ವ್ಯಕ್ತಿಗಳು ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ.
ಅವರ ಕೃತ್ಯವು ದೇಶದ ವಿರುದ್ಧ ಯುದ್ಧ ನಡೆಸುವುದು, ದೇಶದ್ರೋಹ ಮಾಡುವುದು ಮತ್ತು ವಿವಿಧ ಗುಂಪುಗಳ ನಡುವೆ ದ್ವೇಷ ಭಾವನೆ ಬಿತ್ತುವುದಾಗಿದೆ ಎಂದು ಇ.ಡಿ ತಿಳಿಸಿದೆ. ಅವರಿಬ್ಬರ ಮೇಲೆ ಮೊದಲು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ಸಿಬಿಐ ಪ್ರಕರಣ ದಾಖಲಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.