ಇಂಫಾಲ: ಸಂಘರ್ಷ ಪೀಡಿತ ಮಣಿಪುರದಲ್ಲಿ ಪೊಲೀಸ್ ಠಾಣೆ ಹಾಗೂ ಶಾಸಕರ ನಿವಾಸಗಳ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ನವೆಂಬರ್ 16 ರಂದು ಶಾಸಕರ ಮನೆಗೆ ನುಗ್ಗಿ ಬೆಂಕಿ ಹಚ್ಚಿ ಲೂಟಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಫಾಲ್ ಪಶ್ಚಿಮ ಜಿಲ್ಲೆಯ ಪಾಟ್ಸೋಯಿ ಪೊಲೀಸ್ ಠಾಣೆ ವ್ಯಾಪ್ತಿಯ ಕಿಯಾಮ್ ಮಮಾಂಗ್ ಲೈಕೈ ಎಂಬಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಬಂಧಿತನನ್ನು ಚೋಂಗ್ಥಮ್ ಥೋಯ್ಚಾ(20) ಎಂದು ಗುರುತಿಸಲಾಗಿದೆ.
ಅಲ್ಲದೇ ನವೆಂಬರ್ 27ರಂದು ಕಕ್ಚಿಂಗ್ ಪೊಲೀಸ್ ಠಾಣೆ ಮತ್ತು ಅದರ ಸಿಬ್ಬಂದಿ ಮೇಲೆ ದಾಳಿ ಮಾಡಿದ 7 ಜನರನ್ನು ಗುರುವಾರ ಬಂಧಿಸಲಾಗಿದೆ. ಶಾಸಕರ ನಿವಾಸಗಳ ದಾಳಿ ನಡೆಸಿದ ಪ್ರಕರಣದಲ್ಲಿ ಬಂಧಿಸಲಾದ ನಾಲ್ವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಪೊಲೀಸ್ ಠಾಣೆ ದಾಳಿ ನಡೆಸಲಾಗಿತ್ತು.
ನವೆಂಬರ್ 11 ರಂದು ಜಿರೀಬಾಮ್ ಜಿಲ್ಲೆಯಲ್ಲಿ ಶಂಕಿತ ಹಮರ್ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಗುಂಡಿನ ಚಕಮಕಿಯಲ್ಲಿ 10 ಶಂಕಿತ ಉಗ್ರರು ಹತರಾಗಿದ್ದರು. ಈ ವೇಳೆ ನಿರಾಶ್ರಿತರ ಕೇಂದ್ರದಲ್ಲಿದ್ದ ಮೈತೇಯಿ ಸಮುದಾಯಕ್ಕೆ ಸೇರಿದ ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳು ನಾಪತ್ತೆಯಾಗಿದ್ದರು.
ಶೋಧ ಕಾರ್ಯಾಚರಣೆ ಬಳಿಕ ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳ ಶವಗಳು ನದಿಯಲ್ಲಿ ಪತ್ತೆಯಾಗಿದ್ದವು. ಇದರಿಂದ ಕುಪಿತಗೊಂಡ ಜನರ ಗುಂಪು ಬಿಜೆಪಿಯ ಮೂವರು ಶಾಸಕರ ಮನೆಗಳಿಗೆ ಬೆಂಕಿ ಹಚ್ಚಿತ್ತು. ಅದರಲ್ಲಿ ಒಬ್ಬರು ಸಚಿವರ ಮನೆಯೂ ಸೇರಿತ್ತು.
ಕಳೆದ ವರ್ಷದ ಮೇ ತಿಂಗಳಿನಲ್ಲಿ ಮಣಿಪುರದಲ್ಲಿ ಮೈತೇಯಿ -ಕುಕಿ ಜೊ ಸಂಘರ್ಷ ಶುರುವಾಗಿದ್ದು, ಈವರೆಗೆ ಸುಮಾರು 250 ಜನ ಮೃತಪಟ್ಟಿದ್ದು, ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.