ಕರ್ಫ್ಯೂ ಆದೇಶವು ಜಾರಿಯಲ್ಲಿರುವ ಮಣಿಪುರದ ರಾಜಧಾನಿ ಇಂಫಾಲ್‌ನಲ್ಲಿ ಪ್ರಮುಖ ರಸ್ತೆಗಳಲ್ಲಿ ಬುಧವಾರ ವಾಹನ ಸಂಚಾರ ವಿರಳವಾಗಿತ್ತು
–ಪಿಟಿಐ ಚಿತ್ರ
ಇಂಫಾಲ್: ರಾಜಭವನಕ್ಕೆ ಜಾಥಾ ತೆರಳುವ ವೇಳೆ ವಿದ್ಯಾರ್ಥಿಗಳು ಮತ್ತು ಭದ್ರತಾ ಸಿಬ್ಬಂದಿಯ ನಡುವೆ ಚಕಮಕಿ ಹಾಗೂ ಸಂಘರ್ಷ ನಡೆದಿದ್ದ ಬೆಳವಣಿಗೆಗಳ ಹಿಂದೆಯೇ ಮಣಿಪುರದ ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರು ಬುಧವರ ಗುವಾಹಟಿಗೆ ತೆರಳಿದರು.
ಅಸ್ಸಾಂನ ರಾಜ್ಯಪಾಲರೂ ಆಗಿರುವ ಆಚಾರ್ಯ ಅವರಿಗೆ ಹೆಚ್ಚುವರಿಯಾಗಿ ಮಣಿಪುರದ ಉಸ್ತುವಾರಿಯನ್ನೂ ವಹಿಸಲಾಗಿದೆ. ಅವರು ಬೆಳಿಗ್ಗೆಯೇ ಗುವಾಹಟಿಗೆ ನಿರ್ಗಮಿಸಿದರು ಎಂದು ಅಧಿಕಾರಿಗಳು ದೃಢಪಡಿಸಿದರು.
ರಾಜಭವನದ ಬಳಿಯೇ ನಡೆದಿದ್ದ ಘರ್ಷಣೆಯಲ್ಲಿ 55 ವಿದ್ಯಾರ್ಥಿಗಳು ಹಾಗೂ ಕೆಲ ಭದ್ರತಾ ಸಿಬ್ಬಂದಿಗೆ ಗಾಯಗಳಾಗಿವೆ. ಮಂಗಳವಾರ ರಾತ್ರಿ ವಿದ್ಯಾರ್ಥಿಗಳ ಮುಖಂಡರ ಜೊತೆಗೆ ರಾಜ್ಯಪಾಲರು ಚರ್ಚಿಸಿದ್ದು, ಅವರ ಅಹವಾಲುಗಳನ್ನು ಆಲಿಸಿದರು.
ಪರೀಕ್ಷೆಗಳ ಮುಂದೂಡಿಕೆ: ಇನ್ನೊಂದು ಬೆಳವಣಿಗೆಯಲ್ಲಿ ಮಣಿಪುರ ವಿಶ್ವವಿದ್ಯಾಲಯವು ಪದವಿ ಮತ್ತು ಸ್ನಾತಕೋತ್ತರ ಪದವಿ ಹಂತದ ಎಲ್ಲ ಪರೀಕ್ಷೆಗಳನ್ನು ಅನಿರ್ದಿಷ್ಟಾವಧಿವರೆಗೂ ಮುಂದೂಡಿದೆ.
ರಾಜ್ಯದ ಡಿಜಿಪಿ ಮತ್ತು ಸರ್ಕಾರದ ಭದ್ರತಾ ಸಲಹೆಗಾರರ ಪದಚ್ಯುತಿಗೆ ಒತ್ತಾಯಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಈಚೆಗೆ ನಡೆದ ರಾಕೆಟ್, ಡ್ರೋನ್ ದಾಳಿ ಹಿನ್ನೆಲೆಯಲ್ಲಿ ಮಣಿಪುರದಲ್ಲಿ ಕಾನೂನು ಸುವ್ಯವಸ್ಥೆ ರಕ್ಷಿಸಲು ಈ ಇಬ್ಬರೂ ಅಸಮರ್ಥರಾಗಿದ್ದಾರೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.
ಬುಧವಾರ ರಾಜ್ಯದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿತ್ತು. ಯಾವುದೇ ಘರ್ಷಣೆ, ಪ್ರತಿಭಟನೆ ಹೊಸದಾಗಿ ವರದಿ ಆಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಎರಡು ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿಯಲ್ಲಿದ್ದು, ರಾಜ್ಯದಾದ್ಯಂತ ಇಂಟರ್‌ನೆಟ್ ಸಂಪರ್ಕ ಸೇವೆಯನ್ನು ರದ್ದುಗೊಳಿಸಲಾಗಿದೆ.
ಸಂಘರ್ಷ ಪೀಡಿತ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ಮುನ್ನೆಚ್ಚರಿಕೆಯಾಗಿ ನಿಯೋಜಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ.
ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಅವರೂ ವಿದ್ಯಾರ್ಥಿ ಮುಖಂಡರ ಜೊತೆ ಚರ್ಚಿಸಿದರು. ‘ಯುವಜನರ ಅಭಿಪ್ರಾಯಗಳು ಮುಖ್ಯವಾದುದು. ರಾಜ್ಯದ ಸಮಸ್ಯೆ ಬಗೆಹರಿಸಲು ಸರ್ಕಾರ ಬದ್ಧವಾಗಿದೆ. ನಾವು ಒಟ್ಟಾಗಿಯೇ ಮಣಿಪುರದ ಭವಿಷ್ಯಕ್ಕಾಗಿ ಕಾರ್ಯನಿರ್ವಹಿಸಬೇಕಾಗಿದೆ’ ಎಂದು ಸಿಂಗ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.