ಮಣಿಪುರ ಹೈಕೋರ್ಟ್
– ವೆಬ್‌ಸೈಟ್ ಚಿತ್ರ
ಇಂಫಾಲ: ಆರು ತಿಂಗಳೊಳಗೆ ಪಂಚಾಯತ್ ಚುನಾವಣೆ ನಡೆಸುವಂತೆ ಮಣಿಪುರ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಶುಕ್ರವಾರ ನಿರ್ದೇಶನ ನೀಡಿದೆ.
ದೀರ್ಘಕಾಲದಿಂದ ಬಾಕಿ ಇರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯ ವಿಚಾರಣೆಯ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಕೆಂಪಯ್ಯ ಸೋಮಶೇಖರ್ ಮತ್ತು ನ್ಯಾಯಮೂರ್ತಿ ಗುಣೇಶ್ವರ ಶರ್ಮಾ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಆದೇಶವನ್ನು ಹೊರಡಿಸಿದೆ.
2017ರಲ್ಲಿ ಕೊನೆಯದಾಗಿ ರಾಜ್ಯದಲ್ಲಿ ಪಂಚಾಯತ್ ಚುನಾವಣೆಗಳು ನಡೆದಿದ್ದವು.
2023ರ ಜೂನ್‌ನಲ್ಲಿ ಚುನಾವಣೆ ನಿಗದಿಪಡಿಸಲಾಗಿದ್ದರೂ ಈವರೆಗೂ ನಡೆದಿಲ್ಲ. ಅಂದಿನಿಂದ ಪಂಚಾಯತ್ ರಾಜ್ ಸಂಸ್ಥೆಗಳು ಆಡಳಿತ ಸಮಿತಿಗಳ ಮೂಲಕ ಕಾರ್ಯನಿರ್ವಹಿಸುತ್ತಿವೆ.
‘ಮಣಿಪುರದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಕಾರ್ಯಸಾಧ್ಯವಾಗುವಂತೆ ಮಾಡಲು, ಆರು ತಿಂಗಳ ಅವಧಿಯನ್ನು ಮೀರದಂತೆ ಗ್ರಾಮ ಪಂಚಾಯತ್‌ಗಳಿಗೆ ಹೊಸ ಆಡಳಿತ ಸಮಿತಿ ಮತ್ತು ಜಿಲ್ಲಾ ಪರಿಷತ್‌ಗೆ ಆಡಳಿತಾಧಿಕಾರಿಯನ್ನು ನೇಮಿಸುವ ಸ್ವಾತಂತ್ರ್ಯವನ್ನು ರಾಜ್ಯ ಸರ್ಕಾರಕ್ಕೆ ನೀಡಲಾಗಿದೆ’ ಎಂದು ಕೋರ್ಟ್ ಹೇಳಿದೆ.
ಜೊತೆಗೆ ಆಡಳಿತ ಸಮಿತಿಗಳಿಗೆ ರಾಜ್ಯ ಸರ್ಕಾರ ಈ ಹಿಂದೆ ಮಾಡಿದ್ದ ಎಲ್ಲಾ ನೇಮಕಾತಿ ಆದೇಶಗಳನ್ನು ನ್ಯಾಯಾಲಯವು ರದ್ದುಗೊಳಿಸಿದೆ.
ರಾಜ್ಯ ಸರ್ಕಾರವು 6 ತಿಂಗಳು ಮೀರದ ಅವಧಿಗೆ ಗ್ರಾಮ ಪಂಚಾಯತ್‌ಗೆ ಹೊಸ ಆಡಳಿತ ಸಮಿತಿ ಮತ್ತು ಜಿಲ್ಲಾ ಪರಿಷತ್ತಿಗೆ ಆಡಳಿತಾಧಿಕಾರಿಯನ್ನು ನೇಮಿಸಲು ಸ್ವಾತಂತ್ರ್ಯ ಹೊಂದಿದೆ’ ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.