ADVERTISEMENT

ಮಣಿಪುರ ಭೂಕುಸಿತ: ಮೃತರ ಸಂಖ್ಯೆ 25ಕ್ಕೆ ಏರಿಕೆ

ಅವಶೇಷಗಳಡಿ ಸಿಲುಕಿದವರ ರಕ್ಷಣಾ ಕಾರ್ಯ ಮುಂದುವರಿಕೆ: ಇನ್ನೂ 38 ಮಂದಿ ಕಾಣೆ

ಪಿಟಿಐ
Published 2 ಜುಲೈ 2022, 21:31 IST
Last Updated 2 ಜುಲೈ 2022, 21:31 IST
ಮಣಿಪುರದ ನೊನಿ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಿಲುಕಿದ ಸಂತ್ರಸ್ತರ ರಕ್ಷಣೆಯಲ್ಲಿ ತೊಡಗಿರುವ ಸೇನೆ   –ಎಎಫ್‌ಪಿ ಚಿತ್ರ
ಮಣಿಪುರದ ನೊನಿ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಿಲುಕಿದ ಸಂತ್ರಸ್ತರ ರಕ್ಷಣೆಯಲ್ಲಿ ತೊಡಗಿರುವ ಸೇನೆ   –ಎಎಫ್‌ಪಿ ಚಿತ್ರ   

ಗುವಾಹಟಿ/ಇಂಫಾಲ (ಪಿಟಿಐ): ಮಣಿಪುರದ ನೊನಿ ಜಿಲ್ಲೆಯ ರೈಲ್ವೆ ಕಾಮಗಾರಿ ಪ್ರದೇಶದ ಬಳಿ ನಡೆದ ಭೂಕುಸಿತದಿಂದಾಗಿ ಮೃತಪಟ್ಟವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಇನ್ನೂ 38 ಮಂದಿ ಕಾಣೆಯಾಗಿದ್ದಾರೆ.

‘ಅವಶೇಷಗಳ ಅಡಿ ಸಿಲುಕಿದ್ದ ಇನ್ನೂ 5 ಮೃತದೇಹಗಳನ್ನು ಶನಿವಾರ ಹೊರತೆಗೆಯಲಾಗಿದೆ. ರಕ್ಷಣಾ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಲಾಗಿದ್ದು, ಇದಕ್ಕಾಗಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮೃತದೇಹಗಳನ್ನು ಹೊರತೆಗೆಯುವ ಕಾರ್ಯ ಮುಂದುವರಿದಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಭೂಕುಸಿತ ಉಂಟಾಗಿರುವ ತುಪುಲ್‌ ಪ್ರದೇಶದಲ್ಲಿ ಶನಿವಾರ ಮುಂಜಾನೆ ಮತ್ತೆ ಮಳೆ ಸುರಿದಿದೆ. ಪ್ರತಿಕೂಲ ಹವಮಾನವು ರಕ್ಷಣಾ ಕಾರ್ಯಕ್ಕೆ ತೊಡಕಾಗಿ ಪರಿಣಮಿಸಿದೆ’ ಎಂದು ಮಣಿಪುರದ ಮುಖ್ಯಮಂತ್ರಿ ಬಿರೇನ್‌ ಸಿಂಗ್‌ ಟ್ವೀಟ್‌ ಮಾಡಿದ್ದಾರೆ.

ADVERTISEMENT

‘ಸೇನೆ, ಅಸ್ಸಾಂ ರೈಫಲ್ಸ್‌, ಟೆರಿ ಟೊರಿಯಲ್‌ ಆರ್ಮಿ, ಎಸ್‌ಡಿಆರ್‌ಎಫ್‌ ಮತ್ತು ಎನ್‌ಡಿಆರ್‌ಎಫ್‌ ಸಿಬ್ಬಂದಿ ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ. ನಾಪತ್ತೆಯಾದವರ ಪತ್ತೆಗೆ ಶ್ವಾನದಳವನ್ನೂ ನಿಯೋಜಿಸಲಾಗಿದೆ. ಘಟನೆಯಲ್ಲಿ 6 ನಾಗರಿಕರು ಸಾವಿಗೀಡಾಗಿ
ದ್ದಾರೆ. ಒಂದು ಮೃತದೇಹದ ಗುರುತು ಇನ್ನೂ ಪತ್ತೆಯಾಗಿಲ್ಲ’ ಎಂದು ರಕ್ಷಣಾ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.

ಅಸ್ಸಾಂನ 8 ಮಂದಿ ಸಾವು (ಗುವಾಹಟಿ ವರದಿ):‘ಭೂಕುಸಿತದಲ್ಲಿ ಒಬ್ಬ ಭದ್ರತಾ ಸಿಬ್ಬಂದಿ ಸೇರಿದಂತೆ ಅಸ್ಸಾಂ ರಾಜ್ಯದ ಒಟ್ಟು 8 ಮಂದಿ ಮೃತಪಟ್ಟಿದ್ದಾರೆ. ರೈಲ್ವೆ ಎಂಜಿನಿಯರ್‌ ಸೇರಿದಂತೆ ಒಟ್ಟು 12 ಮಂದಿ ನಾಪತ್ತೆಯಾಗಿದ್ದಾರೆ’ ಎಂದು ಸಚಿವ ಪಿಜುಸ್‌ ಹಜಾರಿಕ ಹೇಳಿದ್ದಾರೆ.

ಘಟನಾ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಮಾತನಾಡಿದ ಅವರು, ‘ರಾಜ್ಯದ ಐವರನ್ನು ರಕ್ಷಿಸಲಾಗಿದೆ. ಈ ಪೈಕಿ ಇಬ್ಬರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದಿದ್ದಾರೆ.

‘ಮೊರಿಗಾಂವ್‌ ಜಿಲ್ಲೆಯ ಐವರು ಘಟನೆಯಲ್ಲಿ ಮೃತರಾಗಿದ್ದಾರೆ. ಶವ ಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ತುಪುಲ್‌ ರೈಲ್ವೆ ಕಾಮಗಾ ರಿಯಲ್ಲಿ ತೊಡಗಿದ್ದ ಜಿಲ್ಲೆಯ ಮತ್ತಷ್ಟು ಕಾರ್ಮಿಕರು ನಾಪತ್ತೆಯಾಗಿದ್ದಾರೆ. ಅವರ ಕುಟುಂಬ ಸದಸ್ಯರ ಜೊತೆ ಜಿಲ್ಲಾಡಳಿತ ನಿರಂತರ ಸಂಪರ್ಕದಲ್ಲಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.