
ನವದೆಹಲಿ: ಮಣಿಪುರದಲ್ಲಿನ ಜನಾಂಗೀಯ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ತುಣುಕು ‘ತಿರುಚಲ್ಪಟ್ಟಿದೆ’ ಎಂದು ಎನ್‌ಎಫ್‌ಎಸ್‌ಎಲ್ ನೀಡಿದ ವರದಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ಗಮನಿಸಿತು.
ಗುಜರಾತ್‌ನ ರಾಷ್ಟ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯದ (ಎನ್‌ಎಫ್‌ಎಸ್‌ಎಲ್) ವರದಿಯ ಪ್ರಕಾರ, ‘ಆಡಿಯೊ ತುಣುಕು ಪರಿಷ್ಕರಣೆಗೊಳಗಾಗಿದ್ದು ತಿರುಚಲ್ಪಟ್ಟಿದೆ. ವಿಧಿವಿಜ್ಞಾನದ ಧ್ವನಿ ಹೋಲಿಕೆಗೆ ವೈಜ್ಞಾನಿಕವಾಗಿ ಸರಿಹೊಂದುತ್ತಿಲ್ಲ’ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಅಲೋಕ್ ಅರಾಧೆ ಅವರಿದ್ದ ನ್ಯಾಯಪೀಠವು ಅಭಿಪ್ರಾಯಪಟ್ಟಿದೆ.
ಮಣಿಪುರ ಜನಾಂಗೀಯ ಸಂಘರ್ಷದಲ್ಲಿ ಮಾಜಿ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರ ಪಾತ್ರ ಇದೆ ಎಂದು ಹೇಳಲಾದ ಸೋರಿಕೆಯಾದ ಆಡಿಯೊ ತುಣುಕು ಕುರಿತ ವಿಷಯಕ್ಕೆ ಸಂಬಂಧಿಸಿದಂತೆ, ಎಸ್‌ಐಟಿ ತನಿಖೆ ನಡೆಸುವಂತೆ ಆಗ್ರಹಿಸಿ ಕುಕಿ ಸಂಘಟನೆಯ ಮಾನವ ಹಕ್ಕು ಟ್ರಸ್ಟ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿತು.
ಎನ್‌ಎಫ್‌ಎಸ್‌ಎಲ್ ವರದಿಯ ಪ್ರತಿಯನ್ನು ಅರ್ಜಿದಾರರಿಗೆ ನೀಡಬೇಕು. ಇದರಿಂದ ಅವರು ಅದಕ್ಕೆ ಪ್ರತಿಕ್ರಿಯಿಸಬಹುದು ಎಂದು ಕುಕಿ ಸಂಘಟನೆ ಪರ ವಕೀಲ ಪ್ರಶಾಂತ್ ಭೂಷಣ್ ನ್ಯಾಯಪೀಠವನ್ನು ಕೋರಿದರು.
ವರದಿಯ ಪ್ರತಿಯನ್ನು ಸಂಘಟನೆ ಪರ ವಕೀಲರಿಗೆ ನೀಡುವಂತೆ ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಿಗೆ ಸೂಚಿಸಿದ ನ್ಯಾಯಪೀಠವು, ವಿಚಾರಣೆಯನ್ನು ಡಿ. 8ಕ್ಕೆ ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.