ಇಂಫಾಲ: ಮಣಿಪುರದಲ್ಲಿ ಸಂಗಾಯ್ ಉತ್ಸವ ವಿರೋಧಿ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ. ಪೂರ್ವ ಇಂಫಾಲ ಜಿಲ್ಲೆಯಲ್ಲಿ ಶುಕ್ರವಾರ ಮೈತೇಯಿ ಬೆಂಬಲಿತ ಸಂಘಟನೆ ‘ಕೊಕೊಮಿ’, ಅಂಗಡಿ ಮುಂಗಟ್ಟು ಮುಚ್ಚುವಂತೆ ಕರೆ ನೀಡಿ, ರಸ್ತೆಗಿಳಿದ ವೇಳೆ ಭದ್ರತಾ ಪಡೆಗಳೊಂದಿಗೆ ಘರ್ಷಣೆ ನಡೆಯಿತು.
ಮಣಿಪುರ ಸಮಗ್ರತೆಗಾಗಿನ ಸಂಚಾಲನಾ ಸಮಿತಿ (ಕೊಕೊಮಿ) ರಾಜ್ಯ ಸರ್ಕಾರ ನಡೆಸುತ್ತಿರುವ ಪ್ರವಾಸೋದ್ಯಮ ಉತ್ಸವವನ್ನು ವಿರೋಧಿಸಿತು. ರಾಜ್ಯದಲ್ಲಿ ಜನಾಂಗೀಯ ಸಂಘರ್ಷದಿಂದ ಜನರು ಊರುಗಳನ್ನು ತೊರೆದಿದ್ದಾರೆ. ಇಂತಹ ಸೂಕ್ಷ್ಮ ಪರಿಸ್ಥಿತಿ ನಿರ್ಮಾಣವಾಗಿರುವ ಸಂದರ್ಭದಲ್ಲಿ ಸಂಭ್ರಮದ ಉತ್ಸವ ಆಯೋಜನೆ ಮಾಡಿರುವುದು ಸರಿಯಲ್ಲ ಎಂದು ಸಮಿತಿ ಪ್ರತಿಭಟನೆ ನಡೆಸಿತು.
ಖುರೈನಲ್ಲಿ ಉತ್ಸವ ನಡೆಯುತ್ತಿದ್ದ ಸ್ಥಳಕ್ಕೆ ಕೆಲವು ಪ್ರತಿಭಟನಕಾರರು ನುಗ್ಗಲು ಪ್ರಯತ್ನಿಸಿದಾಗ ಭದ್ರತಾ ಸಿಬ್ಬಂದಿ ತಡೆದಿದ್ದರು. ಈ ವೇಳೆ ಪರಸ್ಪರ ಘರ್ಷಣೆ ನಡೆದು ಪ್ರತಿಭಟನಕಾರರು ಕಲ್ಲು ತೂರಿದರು. ಇದರಿಂದ ಹಲವು ಸುತ್ತು ಅಶ್ರುವಾಯು ಸಿಡಿಸಬೇಕಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಕೆಲ ಪ್ರತಿಭಟನಕಾರರಿಗೆ ಗಾಯಗಳಾಗಿವೆ ಎಂದು ಕೊಕೊಮಿ ಸಮಿತಿ ತಿಳಿಸಿದೆ.
ಪ್ರತಿಭಟನೆಯಿಂದ ಇಂಫಾಲ ಕಣಿವೆಯ ಜಿಲ್ಲೆಗಳಲ್ಲಿ ಜನ ಜೀವನ ಅಸ್ತವ್ಯಸ್ತವಾಗಿತ್ತು. ಶಾಲೆ, ಕಾಲೇಜುಗಳು ಬಾಗಿಲು ಮುಚ್ಚಿದ್ದವು. ಸಾರ್ವಜನಿಕ ಸಾರಿಗೆ ಸೇವೆಯೂ ವ್ಯತ್ಯಯವಾಗಿತ್ತು.
2023ರ ಜನಾಂಗೀಯ ಹಿಂಸಾಚಾರ 260ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದ ನಂತರ, ಬಿಜೆಪಿಯ ಬಿರೇನ್ ಸಿಂಗ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಕಳೆದ (2025) ಫೆಬ್ರವರಿಯಿಂದ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.