ADVERTISEMENT

ಮಣಿಪುರ: ಶೇ 78.03ರಷ್ಟು ಮತದಾನ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2022, 22:15 IST
Last Updated 28 ಫೆಬ್ರುವರಿ 2022, 22:15 IST
   

ಗುವಾಹಟಿ: ಕೆಲವು ಹಿಂಸಾಚಾರದ ಘಟನೆಗಳ ಮಧ್ಯೆಯೇ ಮಣಿಪುರ ವಿಧಾನಸಭೆಗೆ ಸೋಮವಾರ ನಡೆದ ಮತದಾನದಲ್ಲಿ ಶೇ 78.03ರಷ್ಟು ಜನರು ಮತ ಚಲಾಯಿಸಿದ್ದಾರೆ. 60 ಸದಸ್ಯ ಬಲದ ವಿಧಾನಸಭೆಗೆ ಮೊದಲ ಹಂತದಲ್ಲಿ 38 ಕ್ಷೇತ್ರಗಳಿಗೆ ಮತದಾನ ನಡೆಯಿತು.ಮಾರ್ಚ್ 5ರಂದು 22 ಕ್ಷೇತ್ರಗಳಿಗೆ ಎರಡನೇ ಹಂತದ ಮತದಾನ ನಡೆಯಲಿದೆ.

ಕಾಂಗ್‌ಪೋಕಪಿ ಜಿಲ್ಲೆಯಲ್ಲಿ ಅತಿಹೆಚ್ಚು ಅಂದರೆ, ಶೇ 82.97ರಷ್ಟು ಮತದಾನವಾಗಿದೆ.ಮುಖ್ಯಮಂತ್ರಿ ಬಿರೆನ್‌ ಸಿಂಗ್ ಸೇರಿದಂತೆ 173 ಅಭ್ಯರ್ಥಿಗಳು ಕಣದಲ್ಲಿದ್ದರು.2017ರ ಚುನಾವಣೆಯಲ್ಲಿ ಬಿಜೆಪಿ 18ರಲ್ಲಿ, ಕಾಂಗ್ರೆಸ್ 16ರಲ್ಲಿ ಗೆದ್ದಿದ್ದವು.

ಅಲ್ಲಲ್ಲಿ ಹಿಂಸಾಚಾರ:ಚುರಾಚಾಂದ್‌ ಪುರ ಜಿಲ್ಲೆಯಲ್ಲಿ ಎರಡು ಪಕ್ಷಗಳ ನಡುವೆ ಘರ್ಷಣೆ ನಡೆದಿದೆ. ಇಂಫಾಲ್‌ ಪಶ್ಚಿಮ ಜಿಲ್ಲೆಯ ಲಾಂಗ್ತಾಬಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಕ್ವಾ ಎಂಬಲ್ಲಿ ಬಿಜೆಪಿಯ ಮತಗಟ್ಟೆ ಮಾಹಿತಿ ಕೇಂದ್ರವನ್ನು ಕಾಂಗ್ರೆಸ್ ಕಾರ್ಯಕರ್ತರು ಧ್ವಂಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಕೈರಾವೋ ವಿಧಾನಸಭಾ ಕ್ಷೇತ್ರದಲ್ಲಿ ಎನ್‌ಪಿಪಿ ಅಭ್ಯರ್ಥಿಯ ವಾಹನವನ್ನು ವಿರೋಧಿ ಪಾಳಯದವರು ಹಾನಿಗೊಳಿಸಿದ್ದಾರೆ.

ADVERTISEMENT

ಮತಗಟ್ಟೆಯನ್ನು ವಶಕ್ಕೆ ಪಡೆಯಲುಬಿಜೆಪಿ ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದರಿಂದ, ಕಾಂಗ್‌ಪೋಕಪಿ ಜಿಲ್ಲೆಯಕೀತಲ್‌ಮನಬಿ ಮತಗಟ್ಟೆಯಲ್ಲಿ ಜನರನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು.

ಚುರಾಚಾಂದ್‌ಪುರ ಜಿಲ್ಲೆಯಲ್ಲಿ ಚುನಾವಣೆಗೆ ನಿಯೋಜನೆಗೊಂಡಿದ್ದ ಪೊಲೀಸ್ ಅಧಿಕಾರಿ ನೋರೆಮ್ ಇಬೊಚೌಬ ಅವರ ಸರ್ವೀಸ್ ರಿವಾಲ್ವರ್‌ನಿಂದ ಆಕಸ್ಮಿಕವಾಗಿ ಗುಂಡು ಹಾರಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.