ADVERTISEMENT

15 ಜನರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವಂತೆ ಸಿಬಿಐಗೆ ಮೋದಿ ಸೂಚನೆ: ಸಿಸೋಡಿಯಾ

ಪಿಟಿಐ
Published 21 ಆಗಸ್ಟ್ 2021, 11:15 IST
Last Updated 21 ಆಗಸ್ಟ್ 2021, 11:15 IST
ಮನೀಶ್ ಸಿಸೋಡಿಯಾ
ಮನೀಶ್ ಸಿಸೋಡಿಯಾ   

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿಯವರು ದೆಹಲಿ ಪೊಲೀಸ್, ಸಿಬಿಐ ಮತ್ತು ಜಾರಿ ನಿರ್ದೇಶನಾಲಯಕ್ಕೆ ಹದಿನೈದು ಮಂದಿಯ ಹೆಸರುಗಳ ಪಟ್ಟಿ ಕಳುಹಿಸಿದ್ದಾರೆ. ಈ ಪಟ್ಟಿಯಲ್ಲಿರುವವರ ಮೇಲೆ ದಾಳಿ ನಡೆಸಿ ಮತ್ತು ನಕಲಿ ಎಫ್‌ಐಆರ್‌ ದಾಖಲಿಸುವಂತೆ ಸೂಚಿಸಿದ್ದಾರೆ‘ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಶನಿವಾರ ಆರೋಪಿಸಿದ್ದಾರೆ.

ಆನ್‌ಲೈನ್ ಮೂಲಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆ ಪಟ್ಟಿಯಲ್ಲಿ ಆಮ್‌ ಆದ್ಮಿ ಪಾರ್ಟಿಗೆ ಸೇರಿದ ಹಲವರ ಹೆಸರಗಳಿರುವುದು ಗೊತ್ತಾಗಿದೆ‘ ಎಂದು ಅವರು ಹೇಳಿದ್ದಾರೆ.

‘ನರೇಂದ್ರ ಮೋದಿಯವರು ಹದಿನೈದು ಮಂದಿ ಹೆಸರುಗಳ ಪಟ್ಟಿಯನ್ನು ಸಿಬಿಐ, ಇಡಿ ಮತ್ತು ದೆಹಲಿ ಪೊಲೀಸರಿಗೆ ನೀಡಿ, ಪಟ್ಟಿಯಲ್ಲಿ ಹೆಸರಿಸುವವರ ವಿರುದ್ಧ ದಾಳಿ ನಡೆಸಿ, ನಕಲಿ ಎಫ್‌ಐಆರ್ ದಾಖಲಿಸಲು ಆದೇಶಿಸಿರುವುದಾಗಿ ನಮ್ಮ ವಿಶ್ವಾಸಾರ್ಹ ಮೂಲಗಳಿಂದ ತಿಳಿದುಬಂದಿದೆ‘ ಎಂದು ಸಿಸೋಡಿಯಾ ಆರೋಪಿಸಿದ್ದಾರೆ.

ADVERTISEMENT

ದೆಹಲಿ ಪೊಲೀಸ್ ಆಯುಕ್ತ ರಾಕೇಶ್ ಅಸ್ತಾನಾ ಅವರು ‘ಈ ಕೆಲಸ ಮಾಡುವುದಾಗಿ‘ ಪ್ರಧಾನಿಯವರಿಗೆ ಭರವಸೆ ನೀಡಿದ್ದಾರೆಂದು ಗೊತ್ತಾಗಿದೆ’ ಎಂದು ಸಿಸೋಡಿಯಾ ಹೇಳಿದರು.

‘ರಾಕೇಶ್ ಅಸ್ತಾನಾ, ಮೋದಿಯವರ ಬ್ರಹ್ಮಾಸ್ತ್ರ. ಅವರು ಭರವಸೆ ನೀಡಿದ ಮೇಲೆ, ಆ ಕೆಲಸವನ್ನೂ ಪೂರ್ಣಗೊಳಿಸುತ್ತಾರೆ‘ ಎಂದು ಹೇಳಿದರು.

‘ಎಎಪಿ ಸತ್ಯ ಮತ್ತು ಪ್ರಾಮಾಣಿಕವಾಗಿ ರಾಜಕೀಯ ಮಾಡುತ್ತದೆ‘ ಎಂದ ಸಿಸೋಡಿಯಾ, ‘ನೀವು ಸಿಬಿಐ ಮತ್ತು ಇಡಿಯನ್ನು ಕಳುಹಿಸಬಹುದು. ನಾವು ಅವರನ್ನು ಸ್ವಾಗತಿಸುತ್ತೇವೆ‘ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.