ADVERTISEMENT

ಜೆಸ್ಸಿಕಾ ಲಾಲ್‌ ಹತ್ಯೆಗೈದಿದ್ದ ಮನು ಶರ್ಮಾ ತಿಹಾರ್‌ ಜೈಲಿನಿಂದ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2020, 12:58 IST
Last Updated 2 ಜೂನ್ 2020, 12:58 IST
ಜೆಸ್ಸಿಕಾ ಲಾಲ್‌ ಹತ್ಯೆಗೈದಿದ್ದ ಮನು ಶರ್ಮಾ
ಜೆಸ್ಸಿಕಾ ಲಾಲ್‌ ಹತ್ಯೆಗೈದಿದ್ದ ಮನು ಶರ್ಮಾ   

ನವದೆಹಲಿ: 1999ರಲ್ಲಿ ನಡೆದಿದ್ದೆಮಾಡೆಲ್ ಜೆಸ್ಸಿಕಾ ಲಾಲ್ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದ ಮನು ಶರ್ಮಾನನ್ನು ತಿಹಾರ್ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.

ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರು ಮನು ಶರ್ಮಾ ಸೇರಿದಂತೆ 18 ಅಪರಾಧಿಗಳ ಬಿಡುಗಡೆಗೆ ಅನುಮತಿ ನೀಡಿದ್ದರು. ಕಳೆದ ತಿಂಗಳು ಸಭೆ ಸೇರಿದ್ದ ತೀರ್ಪು ಪರಿಶೀಲನಾ ಮಂಡಳಿಯು ಶರ್ಮಾ ಸೇರಿದಂತೆ 18ಅಪರಾಧಿಗಳನ್ನು ಬಿಡುಗಡೆ ಮಾಡಲು ತೀರ್ಮಾನಿಸಿ, ಶಿಫಾರಸನ್ನು ಬೈಜಲ್‌ಗೆ ಕಳುಹಿಸಿತ್ತು.

2019ರನವೆಂಬರ್‌ನಲ್ಲಿ ಮನು ಶರ್ಮಾ ಬಿಡುಗಡೆ ಕೋರಿ ದೆಹಲಿ ಹೈಕೋರ್ಟ್‌ಗೆ ಮನವಿ ಸಲ್ಲಿಸಲಾಗಿತ್ತು. ಈಗಾಗಲೇ 17 ವರ್ಷಗಳಕಾಲ ಸೆರೆವಾಸ ಅನುಭವಿಸಿರುವ ಮನು ಶರ್ಮಾ ಅವರನ್ನು ಉತ್ತಮ ನಡುವಳಿಕೆ ಹಿನ್ನೆಲೆಯಲ್ಲಿ ಬಿಡುಗಡೆಗೊಳಿಸಬೇಕೆಂದು ಮನವಿಯಲ್ಲಿ ಕೇಳಿಕೊಳ್ಳಲಾಗಿತ್ತು.

ADVERTISEMENT

ಮನು ಶರ್ಮಾ ಪರ ವಕೀಲರ ಮನವಿಯನ್ನು ಪರಿಶೀಲಿಸಿದ್ದ ಮಂಡಳಿಯು ಉತ್ತಮ ನಡುವಳಿಕೆ ಹಿನ್ನೆಲೆಯಲ್ಲಿ ಶರ್ಮಾ ಬಿಡುಗಡೆಗೆ ತೀರ್ಮಾನಿಸಿತ್ತು.

1999ರ ಏಪ್ರಿಲ್ 30ರಂದು ನವದೆಹಲಿಯಲ್ಲಿ ನಡೆದ ಖಾಸಗಿ ಪಾರ್ಟಿಯೊಂದರಲ್ಲಿ ಮಾಡೆಲ್‌ ಜೆಸ್ಸಿಕಾ ಲಾಲ್‌ ತನಗೆ ಕುಡಿಯಲು ಮದ್ಯ ನೀಡಲಿಲ್ಲ ಎಂಬ ಕಾರಣಕ್ಕೆ ಮನು ಶರ್ಮಾ ಅವರ ಮೇಲೆ ಗುಂಡು ಹಾರಿಸಿ ಕೊಲೆಗೈದಿದ್ದ. ಆ ಪ್ರಕರಣ ದೇಶದಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.

ಹರಿಯಾಣದ ಅಂದಿನ ಪ್ರಭಾವಿ ರಾಜಕಾರಣಿ ವಿನೋದ್‌ ಶರ್ಮಾ ಪುತ್ರನಾದ ಮನು ಶರ್ಮಾನಿಗೆ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ನೀಡಲಾಗಿತ್ತು.

ಜೀವಾವಧಿ ಶಿಕ್ಷೆ ಪೂರ್ಣಗೊಳ್ಳುವುದಕ್ಕೂ 3 ವರ್ಷ ಮೊದಲೇ ಮನು ಶರ್ಮಾ ಬಿಡುಗಡೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.