ADVERTISEMENT

ಶೌಚಗುಂಡಿಗೆ ಕಾರ್ಮಿಕರು: ಪ್ರಮಾಣಪತ್ರಕ್ಕೆ ಸುಪ್ರೀಂ ಕೋರ್ಟ್ ಅಸಮಾಧಾನ

ಪಿಟಿಐ
Published 27 ಫೆಬ್ರುವರಿ 2025, 14:33 IST
Last Updated 27 ಫೆಬ್ರುವರಿ 2025, 14:33 IST
<div class="paragraphs"><p>ಶೌಚಗುಂಡಿಗೆ ಕಾರ್ಮಿಕರು: ಪ್ರಮಾಣಪತ್ರಕ್ಕೆ ಕೋರ್ಟ್ ಅಸಮಾಧಾನ</p></div>

ಶೌಚಗುಂಡಿಗೆ ಕಾರ್ಮಿಕರು: ಪ್ರಮಾಣಪತ್ರಕ್ಕೆ ಕೋರ್ಟ್ ಅಸಮಾಧಾನ

   

ನವದೆಹಲಿ: ಒಳಚರಂಡಿಗಳ, ಶೌಚಗುಂಡಿಗಳ ಸ್ವಚ್ಛತೆಗೆ ಯಂತ್ರಗಳನ್ನು ಬಳಸುವ ಬದಲು ಕಾರ್ಮಿಕರನ್ನು ಇಳಿಸುವ ಪದ್ಧತಿಯನ್ನು ತಮ್ಮ ನಗರ ವ್ಯಾಪ್ತಿಯಲ್ಲಿ ಕೊನೆಗೊಳಿಸಿದ್ದು ಹೇಗೆ ಎಂಬುದರ ಕುರಿತು ದೆಹಲಿ, ಕೋಲ್ಕತ್ತ ಮತ್ತು ಹೈದರಾಬಾದ್‌ನ ಅಧಿಕಾರಿಗಳು ಸಲ್ಲಿಸಿದ ವಿವರಕ್ಕೆ ಸುಪ್ರೀಂ ಕೋರ್ಟ್‌ ಗುರುವಾರ ಅತೃಪ್ತಿ ವ್ಯಕ್ತಪಡಿಸಿದೆ.

ಮುಂದಿನ ವಿಚಾರಣೆ ಸಂದರ್ಭದಲ್ಲಿ ಹಾಜರಿರಬೇಕು ಎಂದು ಕೋಲ್ಕತ್ತ ಮಹಾನಗರ ಪಾಲಿಕೆಯ (ಕೆಎಂಸಿ) ಆಯುಕ್ತ, ದೆಹಲಿ ಜಲ ಮಂಡಳಿಯ (ಡಿಜೆಬಿ) ನಿರ್ದೇಶಕ, ಹೈದರಾಬಾದ್ ಮಹಾನಗರ ನೀರು ಮತ್ತು ಒಳಚರಂಡಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಿಗೆ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಅರವಿಂದ ಕುಮಾರ್ ಅವರು ಇರುವ ವಿಭಾಗೀಯ ಪೀಠವು ಸೂಚಿಸಿದೆ.

ADVERTISEMENT

ಒಳಚರಂಡಿಗಳ ಸ್ವಚ್ಛತೆಗೆ ಯಂತ್ರಗಳನ್ನು ಬಳಸುವ ಬದಲು ಕಾರ್ಮಿಕರನ್ನು ಇಳಿಸುವ ಪದ್ಧತಿಯನ್ನು ಕೊನೆಗೊಳಿಸಿರುವುದಾಗಿ ಹೇಳಿದ್ದರೂ, ಕೆಲವು ಸಂದರ್ಭಗಳಲ್ಲಿ ಈ ನಗರಗಳಲ್ಲಿ ಕಾರ್ಮಿಕರು ಮೃತಪಟ್ಟಿದ್ದು ಹೇಗೆ ಎಂಬುದನ್ನು ಈ ಮೂರು ಸಂಸ್ಥೆಗಳ ಅಧಿಕಾರಿಗಳು ವಿವರಿಸಿಲ್ಲ ಎಂದು ಕೋರ್ಟ್ ಹೇಳಿದೆ.

ಕೆಎಂಸಿ ಮತ್ತು ಡಿಜೆಬಿ ಸಲ್ಲಿಸಿದ ಪ್ರಮಾಣಪತ್ರಗಳು ತೃಪ್ತಿಕರ ಆಗಿಲ್ಲ ಎಂದು ಪೀಠ ಹೇಳಿದೆ. ಈ ನಗರಗಳಲ್ಲಿ ಇಂತಹ ಪದ್ಧತಿಯನ್ನು ಕೊನೆಗೊಳಿಸಲಾಗಿದೆಯೇ ಎಂಬುದೇ ಸ್ಪಷ್ಟವಾಗಿಲ್ಲ ಎಂದು ಹೇಳಿದೆ.

ಮುಂಬೈ ಮತ್ತು ಚೆನ್ನೈ ಮಹಾನಗರಗಳ ಅಧಿಕಾರಿಗಳು ಸಲ್ಲಿಸಿರುವ ಉತ್ತರಗಳು ತೃಪ್ತಿಕರವಾಗಿವೆ ಎಂದು ಅದು ಹೇಳಿದೆ.

‘ಶೌಚಗುಂಡಿ, ಒಳಚರಂಡಿ ಸ್ವಚ್ಛಗೊಳಸಲು ಯಂತ್ರಗಳ ಬದಲು ಕಾರ್ಮಿಕರನ್ನು ಬಳಸಿಕೊಂಡಿದ್ದಕ್ಕಾಗಿ ಸಂಬಂಧಪಟ್ಟ ಅಧಿಕಾರಿ ಅಥವಾ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಕ್ರಮ ಏಕೆ ಜರುಗಿಸಬಾರದು ಎಂಬ ಕುರಿತಾಗಿ ಎಲ್ಲ ಅಧಿಕಾರಿಗಳು ವಿವರಣೆ ನೀಡಬೇಕು’ ಎಂದ ಸೂಚಿಸಿದೆ. ವಿಚಾರಣೆಯನ್ನು ಮಾರ್ಚ್ 20ಕ್ಕೆ ಮುಂದೂಡಲಾಗಿದೆ.

ಬಿಬಿಎಂಪಿ ಆಯುಕ್ತರಿಗೆ ತಾಕೀತು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಆಯುಕ್ತರು ಕೂಡ ಮುಂದಿನ ವಿಚಾರಣೆ ಸಂದರ್ಭದಲ್ಲಿ ಹಾಜರಿರಬೇಕು ಎಂದು ಪೀಠವು ತಾಕೀತು ಮಾಡಿದೆ. ಬಿಬಿಎಂಪಿ ಕಡೆಯಿಂದ ಯಾವುದೇ ಪ್ರಮಾಣಪತ್ರ ಸಲ್ಲಿಕೆ ಆಗಿಲ್ಲ ಪಾಲಿಕೆಯ ಪ್ರತಿನಿಧಿಯು ಹಾಜರಾಗಿಯೂ ಇಲ್ಲ ಎಂದು ಪೀಠ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.