ADVERTISEMENT

ಒಡಿಶಾದಲ್ಲಿ ಹಳಿತಪ್ಪಿದ ಗೂಡ್ಸ್‌ ರೈಲು; ಮೂವರು ಸಾವು

ಪಿಟಿಐ
Published 21 ನವೆಂಬರ್ 2022, 11:17 IST
Last Updated 21 ನವೆಂಬರ್ 2022, 11:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜಾಜ್‌ಪುರ: ಒಡಿಶಾದ ಜಾಜ್‌ಪುರ ಜಿಲ್ಲೆಯ ಕೊರೈ ರೈಲು ನಿಲ್ದಾಣದಲ್ಲಿ ಗೂಡ್ಸ್‌ ರೈಲೊಂದು ಸೋಮವಾರ ಬೆಳಿಗ್ಗೆ ಹಳಿತಪ್ಪಿ, ನಿಲ್ದಾಣದಲ್ಲಿ ಕಾಯುತ್ತಿದ್ದ ಪ್ರಯಾಣಿಕರ ಮೇಲೆ ಹರಿದ ಪರಿಣಾಮ ಮೂವರು ಮೃತಪಟ್ಟಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ದುರಂತವು ಬೆಳಿಗ್ಗೆ 6.44 ಗಂಟೆಗೆ ಸಂಭವಿಸಿದೆ. ಈ ಸಂದರ್ಭದಲ್ಲಿ ಪ್ಯಾಸೆಂಜರ್‌ ರೈಲಿಗಾಗಿ ಪ್ರಯಾಣಿಕರು ಪ್ಲಾಟ್‌ಫಾರ್ಮ್‌ ಮತ್ತು ವಿಶ್ರಾಂತಿ ಕೊಠಡಿಯಲ್ಲಿ ಕಾಯುತ್ತಿದ್ದರು ಎಂದು ಪೂರ್ವ ಕರಾವಳಿ ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

ಡಂಗೋವಪೊಸಿಯಿಂದ ಛತ್ತಾಪುರಕ್ಕೆ ಹೊರಟಿದ್ದ ಖಾಲಿ ಗೂಡ್ಸ್‌ ರೈಲಿನ ‘ಲೋಕೊ ಪೈಲಟ್‌’ ಕೊರೈ ರೈಲ್ವೆ ನಿಲ್ದಾಣದಲ್ಲಿ ಹಠಾತ್ತನೇ ಬ್ರೇಕ್‌ ಹಾಕಿದ ಪರಿಣಾಮ, ಅದರ ಎಂಟು ಬೋಗಿಗಳು ಹಳಿತಪ್ಪಿ ಪ್ಲಾಟ್‌ಫಾರ್ಮ್‌ ಮೇಲಿದ್ದ ಪ್ರಯಾಣಿಕರ ಮೇಲೆ ಹರಿದವು ಹಾಗೂ ಮುಗುಚಿ ಬಿದ್ದವು ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ರೈಲಿನ ಕೆಲ ಬೋಗಿಗಳು ಒಂದರ ಮೇಲೊಂದು ಬಿದ್ದು, ಅಲ್ಲಿನ ‘ಸ್ಕೈವಾಕ್‌’ಗೂ ಬಡಿದು, ವಿಶ್ರಾಂತಿ ಕೊಠಡಿ ಮತ್ತು ಟಿಕೆಟ್‌ ಕೌಂಟರ್‌ ಮೇಲೆ ಬಿದ್ದಿದೆ ಎಂದು ಜಾಜ್‌ಪುರದ ಹೆಚ್ಚುವರಿ ಜಿಲ್ಲಾಧಿಕಾರಿ ಅಕ್ಷಯ್‌ ಕುಮಾರ್‌ ಮಲ್ಲಿಕ್‌ ತಿಳಿಸಿದ್ದಾರೆ.

ಮೃತರಲ್ಲಿ ಇಬ್ಬರು ತಾಯಿ ಮತ್ತು ಮಗಳಾಗಿದ್ದು, ಪವಾಡ ಸದೃಶ ರೀತಿಯಲ್ಲಿ ಎರಡೂವರೆ ವರ್ಷದ ಮಗು ಬದುಕುಳಿದಿದೆ ಎಂದು ಹೆಂಡತಿ ಮತ್ತು ಮಗಳನ್ನು ಕಳೆದುಕೊಂಡ ವ್ಯಕ್ತಿ ತಿಳಿಸಿದ್ದಾರೆ.

ಕೆಲವರು ತೀವ್ರವಾಗಿ ಗಾಯಗೊಂಡಿದ್ದು, ಮೃತರ ಸಂಖ್ಯೆ ಏರುವ ಸಾಧ್ಯತೆ ಇದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ. ಈ ಅಪಘಾತದಿಂದ ನಿಲ್ದಾಣದ ಕಟ್ಟಡಕ್ಕೂ ಹಾನಿಯಾಗಿದೆ.

ಪರಿಹಾರ ಘೋಷಣೆ:ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರು ಮೃತರ ಸಂಬಂಧಿಕರಿಗೆ ತಲಾ ₹ 5 ಲಕ್ಷ, ತೀವ್ರ ಗಾಯಗೊಂಡವರಿಗೆ ತಲಾ ₹ 1 ಲಕ್ಷ ಹಾಗೂ ಸಣ್ಣ ಪುಟ್ಟ ಗಾಯಗಳಾದವರಿಗೆ ತಲಾ ₹ 25 ಸಾವಿರ ಪರಿಹಾರ ಘೋಷಿಸಿದ್ದಾರೆ. ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರು ಮೃತರ ಸಂಬಂಧಿಕರಿಗೆ ₹ 2 ಲಕ್ಷ ಪರಿಹಾರ ಘೋಷಿಸಿದ್ದಾರೆ.

ಈ ದುರಂತದಿಂದ ಹೌರಾ– ಚೆನ್ನೈ ಮಾರ್ಗದಲ್ಲಿ ರೈಲುಗಳ ಸಂಚಾರಕ್ಕೆ ತೊಡಕುಂಟಾಯಿತು. ಈ ಮಾರ್ಗದಲ್ಲಿ ಎಂಟು ರೈಲುಗಳ ಸಂಚಾರವನ್ನು ರದ್ದುಪಡಿಸಲಾಯಿತು. 12 ರೈಲುಗಳನ್ನು ಇತರ ಮಾರ್ಗಗಳ ಮೂಲಕ ಕಳುಹಿಸಲಾಯಿತು ಎಂದು ರೈಲ್ವೆ ಇಲಾಖೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿಸ್ವಜಿತ್‌ ಸಾಹು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.