ADVERTISEMENT

ಪತ್ನಿ ಇಚ್ಛೆ ವಿರುದ್ಧ ಲೈಂಗಿಕ ಕ್ರಿಯೆ ನಡೆಸಿದರೆ ವೈವಾಹಿಕ ಅತ್ಯಾಚಾರ: ಹೈಕೋರ್ಟ್

ಕೇರಳ ಹೈಕೋರ್ಟ್‌ ಅಭಿಪ್ರಾಯ

ಪಿಟಿಐ
Published 6 ಆಗಸ್ಟ್ 2021, 20:59 IST
Last Updated 6 ಆಗಸ್ಟ್ 2021, 20:59 IST
   

ಕೊಚ್ಚಿ: ‘ಪತ್ನಿಯ ದೇಹ ಪತಿಗಾಗಿಯೇ ಮೀಸಲಾಗಿದೆ ಎಂದು ಭಾವಿಸಿಕೊಂಡು, ಆಕೆಯ ಇಚ್ಛೆಯ ವಿರುದ್ಧ ಲೈಂಗಿಕ ಕ್ರಿಯೆ ನಡೆಸುವುದು ವೈವಾಹಿಕ ಅತ್ಯಾಚಾರ’ ಎಂದು ಕೇರಳ ಹೈಕೋರ್ಟ್‌ ಹೇಳಿದೆ.

‘ವಿವಾಹ ಮತ್ತು ವಿಚ್ಛೇದನವು ಜಾತ್ಯತೀತ ಕಾನೂನು ವ್ಯಾಪ್ತಿಯಲ್ಲೇ ಇರಬೇಕು’ ಎಂದು ನ್ಯಾಯಮೂರ್ತಿಗಳಾದ ಎ. ಮುಹಮ್ಮದ್‌ ಮುಸ್ತಾಖ್‌ ಮತ್ತು ಕೌಸರ್‌ ಎಡಪ್ಪಗಾಥ್‌ ಅವರನ್ನೊಳಗೊಂಡ ಪೀಠವು ಅಭಿಪ್ರಾಯಪಟ್ಟಿದೆ.

‘ವಿವಾಹದ ಸಂದರ್ಭದಲ್ಲಿ ಪತಿ ಮತ್ತು ಪತ್ನಿ ಇಬ್ಬರೂ ಸಮಾನರು ಎಂದು ಪರಿಗಣಿಸಲಾಗುತ್ತದೆ. ಪತ್ನಿಗಿಂತ ತಾನು ಹೆಚ್ಚು ಶ್ರೇಷ್ಠ ಎಂದು ಪತಿ ಭಾವಿಸಿಕೊಳ್ಳಬಾರದು. ಇದು ಆಕೆಯ ದೇಹವಾಗಿರಬಹುದು ಅಥವಾ ವೈಯಕ್ತಿಕ ಸ್ಥಾನಮಾನಕ್ಕೆ ಸಂಬಂಧಪಟ್ಟದ್ದಾಗಿರಬಹುದು’ ಎಂದು ಪೀಠವು ಹೇಳಿದೆ.

ADVERTISEMENT

ವಿಚ್ಛೇದನ ನೀಡಿದ ಕೌಟುಂಬಿಕ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಎರಡು ಅರ್ಜಿಗಳನ್ನು ತಿರಸ್ಕರಿಸಿದ ನ್ಯಾಯಾಲಯ, ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.

‘ವೈವಾಹಿಕ ಅತ್ಯಾಚಾರವು ವಿಚ್ಛೇದನ ಪಡೆದುಕೊಳ್ಳಲು ಪ್ರಮುಖ ಅಂಶವಾಗಿದೆ’ ಎಂದು ಪೀಠವು ಹೇಳಿದೆ. ‘ಈ ಪ್ರಕರಣದಲ್ಲಿ ಮಹಿಳೆಯು ವಿಚ್ಛೇದನ ಪಡೆದುಕೊಳ್ಳಲು 12 ವರ್ಷಗಳಿಂದ ನ್ಯಾಯಾಂಗದ ದೇವಾಲಯದಲ್ಲಿ ಕಾಯುತ್ತಿದ್ದಾರೆ. ವಿಳಂಬವಾಗಿರು
ವುದನ್ನು ಸಹಿಸಿಕೊಳ್ಳಲು ಈ ಮಹಿಳೆಯಿಂದ ಸಾಧ್ಯವಿಲ್ಲ. ಅವಳ ಕಣ್ಣೀರಿಗೆ ನಾವು ಸಹ ಉತ್ತರದಾಯಿತ್ವವಾಗಿದ್ದೇವೆ’ ಎಂದು ನ್ಯಾಯಾಲಯ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.