ಮಥುರಾದಲ್ಲಿರುವ ಶಾಹಿ ಈದ್ಗಾ ಮಸೀದಿ ಸಂಕೀರ್ಣ ಮತ್ತು ಶ್ರೀಕೃಷ್ಣ ಜನ್ಮಭೂಮಿ ದೇಗುಲ
ಪಿಟಿಐ ಸಂಗ್ರಹ ಚಿತ್ರ
ನವದೆಹಲಿ: ಮಥುರಾದ ಶಾಹಿ ಈದ್ಗಾ ಮಸೀದಿ ಆವರಣವನ್ನು ಕೋರ್ಟ್ ಮೇಲ್ವಿಚಾರಣೆಯಲ್ಲಿ ಸಮೀಕ್ಷೆ ನಡೆಸಬೇಕು ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪಿಗೆ ನೀಡಿದ್ದ ತಡೆಯನ್ನು ಸುಪ್ರೀಂ ಕೋರ್ಟ್ ಬುಧವಾರ ವಿಸ್ತರಣೆ ಮಾಡಿದೆ.
‘ಶಾಹಿ ಮಸೀದಿ ಈದ್ಗಾ ಮಸೀದಿ ಟ್ರಸ್ಟ್’ನ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಹಾಗೂ ಕೆ.ವಿ. ವಿಶ್ವನಾಥನ್ ಅವರಿದ್ದ ಪೀಠ, ಏಪ್ರಿಲ್ ಮೊದಲ ವಾರಕ್ಕೆ ವಿಚಾರಣೆ ಮುಂದೂಡಿತು.
1991ರ ಪೂಜಾ ಸ್ಥಳಗಳು (ವಿಶೇಷ ನಿಬಂಧನೆಗಳು) ಕಾಯ್ದೆ ಸೇರಿ, ಸುಪ್ರೀಂ ಕೋರ್ಟ್ ಮುಂದೆ ಮೂರು ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಹೀಗಾಗಿ ಇದನ್ನು ಏ.1ರಿಂದ ಆರಂಭವಾಗುವ ವಾರಕ್ಕೆ ಪಟ್ಟಿ ಮಾಡಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಅಲ್ಲದೆ ಹೈಕೋರ್ಟ್ ಆದೇಶಕ್ಕೆ ನೀಡಲಾದ ಮಧ್ಯಂತರ ತಡೆ ಮುಂದುವರಿಯಲಿದೆ ಎಂದು ಕೋರ್ಟ್ ಹೇಳಿದೆ.
2023ರ ಡಿಸೆಂಬರ್ 23ರಂದು ಕೋರ್ಟ್ ಮೇಲ್ವಿಚಾರಣೆಯಲ್ಲಿ ಶಾಹಿ ಇದ್ಗಾ ಆವರಣದಲ್ಲಿ ಸಮೀಕ್ಷೆ ನಡೆಸಬೇಕು ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತ್ತು. ಅಲ್ಲದೆ ಸರ್ವೆಯ ಉಸ್ತುವಾರಿಗೆ ವಿಶೇಷ ಆಯುಕ್ತರನ್ನೂ ನೇಮಿಸಿತ್ತು.
ಹೈಕೋರ್ಟ್‌ನ ಈ ಆದೇಶಕ್ಕೆ 2024ರ ಜನವರಿ 16ರಂದು ಸುಪ್ರೀಂ ಕೋರ್ಟ್ ತಡೆ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.