ADVERTISEMENT

ಮಾಸ್ಕ್‌ ಧರಿಸಿ ಅಧಿವೇಶನಕ್ಕೆ ಹಾಜರಾದ ಸಂಸದರು

ಪಿಟಿಐ
Published 14 ಸೆಪ್ಟೆಂಬರ್ 2020, 8:52 IST
Last Updated 14 ಸೆಪ್ಟೆಂಬರ್ 2020, 8:52 IST
ಪ್ರಧಾನಿ ಮೋದಿ (ಬಲ ತುದಿ), ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸೇರಿದಂತೆ ಇತರ ಸಚಿವರು ಸೋಮವಾರ ಅಧಿವೇಶನದಲ್ಲಿ ಭಾಗಿಯಾಗಿದ್ದರು –ಪಿಟಿಐ ಚಿತ್ರ 
ಪ್ರಧಾನಿ ಮೋದಿ (ಬಲ ತುದಿ), ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸೇರಿದಂತೆ ಇತರ ಸಚಿವರು ಸೋಮವಾರ ಅಧಿವೇಶನದಲ್ಲಿ ಭಾಗಿಯಾಗಿದ್ದರು –ಪಿಟಿಐ ಚಿತ್ರ    

ನವದೆಹಲಿ: ಮುಖಕ್ಕೆ ಮಾಸ್ಕ್‌ ಮತ್ತು ಫೇಸ್‌ ಶೀಲ್ಡ್‌ ಧರಿಸಿದ್ದ ಸಂಸದರು, ಎಲ್ಲರ ಆಸನಕ್ಕೂ ಅಳವಡಿಸಿದ್ದ ಪ್ಲಾಸ್ಟಿಕ್‌ ಶೀಲ್ಡ್‌, ಜೊತೆಗೆ ವ್ಯಕ್ತಿಗತ ಅಂತರ....

ಸೋಮವಾರ ಸಂಸತ್ತಿನಲ್ಲಿ ಕಂಡುಬಂದ ದೃಶ್ಯವಿದು.

ಕೋವಿಡ್‌ ನೆರಳಲ್ಲಿ ಆರಂಭವಾದ ಮುಂಗಾರು ಅಧಿವೇಶನದ ಮೊದಲ ದಿನ ಸುಮಾರು 200 ಸಂಸದರು ಹಾಜರಿದ್ದರು. 30ಕ್ಕೂ ಅಧಿಕ ಮಂದಿ ಸಂದರ್ಶಕರ ಗ್ಯಾಲರಿಯಲ್ಲಿ ಕಾಣಿಸಿಕೊಂಡರು.

ADVERTISEMENT

ಕೋವಿಡ್‌ ಕಾರಣ ಅಂತರ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದರಿಂದ ಕೆಲ ಲೋಕಸಭಾ ಸದಸ್ಯರು ರಾಜ್ಯಸಭೆಯ ಕೊಠಡಿಯಲ್ಲಿ ಕೂತಿದ್ದ ದೃಶ್ಯವು ಸಂಸತ್ತಿನಲ್ಲಿ ಅಳವಡಿಸಿದ್ದ ಬೃಹತ್‌ ಟಿವಿ ಪರದೆಯಲ್ಲಿ ಗೋಚರಿಸಿತು.

ಸಂಸತ್ತಿನ ಒಂದು ಸಾಲಿನಲ್ಲಿ ಹಿಂದೆಲ್ಲಾ ಆರು ಮಂದಿ ಕೂರುತ್ತಿದ್ದರು. ಕೋವಿಡ್‌ ಕಾರಣ ಈ ಸಂಖ್ಯೆಯನ್ನು ಮೂರಕ್ಕೆ ಇಳಿಸಲಾಗಿತ್ತು. ಕೊರೊನಾ ವೈರಾಣು ತಗುಲದಂತೆ ತಡೆಯುವ ಸಲುವಾಗಿ ಎಲ್ಲರ ಆಸನಗಳಿಗೂ ಪ್ಲಾಸ್ಟಿಕ್‌ ಶೀಲ್ಡ್‌ ಅಳವಡಿಸಲಾಗಿತ್ತು.

ಸ್ಪೀಕರ್‌ ಅವರ ಬಲಭಾಗದಲ್ಲಿ ಆಡಳಿತ ಪಕ್ಷದ ಸದಸ್ಯರಿಗೆ ನಿಗದಿಮಾಡಿದ್ದ ಸ್ಥಳಗಳಲ್ಲಿ ಒಂದು, ಎರಡು ಮತ್ತು ಮೂರನೇ ಸಂಖ್ಯೆಯ ಆಸನಗಳಲ್ಲಿ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಅವರು ಕುಳಿತುಕೊಂಡಿದ್ದರು.

ವಿರೋಧ ಪಕ್ಷಗಳ ಮೊದಲ ಸಾಲಿನ ಆಸನದಲ್ಲಿ ಡಿಎಂಕೆಯ ಟಿ.ಆರ್‌.ಬಾಲು ಮತ್ತು ಕಾಂಗ್ರೆಸ್‌ನ ಅಧೀರ್‌ ರಂಜನ್‌ ಚೌಧರಿ ಕುಳಿತಿದ್ದರು. ಕಾಂಗ್ರೆಸ್‌ ನಾಯಕ ಫಾರೂಕ್‌ ಅಬ್ದುಲ್ಲಾ ಅವರು ಎರಡನೇ ಸಾಲಿನಲ್ಲಿ ಆಸೀನರಾಗಿದ್ದರು.

ಪ್ರಧಾನಿ ಮೋದಿ ಅವರು ಸಂಸತ್ತಿನೊಳಗೆ ಪ್ರವೇಶಿಸುತ್ತಿದ್ದಂತೆ ಚಪ್ಪಾಳೆ ತಟ್ಟಿ ಅವರನ್ನು ಬರಮಾಡಿಕೊಳ್ಳಲಾಯಿತು. ಜೊತೆಗೆ ‘ಭಾರತ್‌ ಮಾತಾ ಕಿ ಜೈ’ ಎಂಬ ಘೋಷವಾಕ್ಯವೂ ಮೊಳಗಿತು.

ಇತ್ತೀಚೆಗೆ ನಿಧನರಾದ ಪ್ರಣವ್‌ ಮುಖರ್ಜಿ ಹಾಗೂ ಇತರ 13 ಗಣ್ಯರಿಗೆಅಧಿವೇಶನ ಆರಂಭಕ್ಕೂ ಮುನ್ನ ಗೌರವ ನಮನ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.