ADVERTISEMENT

ಪಾಕ್‌ನಲ್ಲಿರುವ ಭಾರತ ದ್ವೇಷಿ ಉಗ್ರ ಮಸೂದ್ ಅಜರ್‌ ಹಾಸಿಗೆ ಹಿಡಿದಿದ್ದಾನೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2018, 4:18 IST
Last Updated 9 ಅಕ್ಟೋಬರ್ 2018, 4:18 IST
ಮಸೂದ್ ಅಜರ್
ಮಸೂದ್ ಅಜರ್   

ನವದೆಹಲಿ: ಪಠಾಣ್‌ಕೋಟ್ ವಾಯುನೆಲೆ ಮೇಲಿನ ದಾಳಿ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾರತಕ್ಕೆ ಬೇಕಿರುವ ಪಾಕ್‌ ಮೂಲದ ಭಯೋತ್ಪಾದಕ ಸಂಘಟನೆ ‘ಜೈಶ್ ಎ ಮೊಹಮದ್‌’ನ ಮುಖ್ಯಸ್ಥ ಮಸೂದ್ ಅಜರ್ ಪ್ರಾಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದಾನೆ ಎಂದು ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ‘ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ.

‘50 ವರ್ಷದ ಅಜರ್ ಕಳೆದ ಒಂದೂವರೆವರ್ಷಗಳಿಂದ ಬೆನ್ನುಮೂಳೆ ಮತ್ತು ಕಿಡ್ನಿಗೆ ಸಂಬಂಧಿಸಿದ ತೊಂದರೆಯಿಂದ ಹಾಸಿಗೆ ಹಿಡಿದಿದ್ದಾನೆ. ಪಾಕಿಸ್ತಾನದ ಸೇನಾಸೆಲೆ ಇರುವ ರಾವಲ್ಪಿಂಡಿಯ ಮಿಲಿಟರಿ ಆಸ್ಪತ್ರೆಯಲ್ಲಿಯೇ ಗುಪ್ತವಾಗಿ ಚಿಕಿತ್ಸೆ ನೀಡಲಾಗುತ್ತಿದೆ.ಈ ಕುರಿತು ಸದ್ಯದ ಮಟ್ಟಿಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಗುಪ್ತಚರ ಅಧಿಕಾರಿಗಳು ಹೇಳಿದ್ದಾರೆ’ ಎಂದು ವರದಿ ಉಲ್ಲೇಖಿಸಿದೆ.

ಮಸೂದ್ ನಿಷ್ಕ್ರಿಯನಾದ ನಂತರ ಉಗ್ರಗಾಮಿ ಸಂಘಟನೆಯಲ್ಲಿ ಬಿರುಕು ಮೂಡಿದ್ದು, ಉತ್ತರಾಧಿಕಾರಕ್ಕಾಗಿ ಸೋದರರಾದ ರವೂಫ್ ಅಸ್ಗರ್ ಮತ್ತು ಅಖ್ತರ್ ಇಬ್ರಾಹಿಂ ನಡುವೆ ತಿಕ್ಕಾಟ ಆರಂಭವಾಗಿದೆ. ಭಾರತ ಮತ್ತು ಆಫ್ಗಾನಿಸ್ತಾನಗಳಲ್ಲಿ ಇವರಿಬ್ಬರೂ ಜಿಹಾದ್ ದಾಳಿಗಳನ್ನು ನಡೆಸುತ್ತಿದ್ದಾರೆ.

ADVERTISEMENT

‘ಹಿಂದೂಸ್ತಾನ್ ಟೈಮ್ಸ್’ ಪ್ರತಿನಿಧಿಗೆ ಪ್ರತಿಕ್ರಿಯಿಸಿದ ರಾಜತಾಂತ್ರಿಕರು ಅಜರ್‌ನ ಅನಾರೋಗ್ಯಪೀಡಿತನಾಗಿದ್ದಾನೆ ಎಂಬುದನ್ನು ದೃಢಪಡಿಸಲಿಲ್ಲ. ಆದರೆ ತನ್ನ ಸ್ವಗ್ರಾಮ ಭಾವಲ್‌ಪುರ್‌ದಲ್ಲಾಗಲಿ ಅಥವಾ ಪಾಕಿಸ್ತಾನದಲ್ಲಿ ಬೇರೆ ಎಲ್ಲಿಯೂ ಮಸೂದ್ ಅಜರ್ ಒಂದೂವರೆ ವರ್ಷಗಳಿಂದ ಕಾಣಿಸಿಕೊಂಡಿಲ್ಲ ಎಂಬುದನ್ನು ದೃಢಪಡಿಸಿದರು.

ಬಲೂಚಿಸ್ತಾನದಲ್ಲಿ ನಡೆಯುತ್ತಿರುವ ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕಲು, ಬುಡಕಟ್ಟು ಮುಖಂಡರನ್ನು ತಣ್ಣಗಾಗಿಸಲು ಪಾಕಿಸ್ತಾನ ಜೈಶ್ ಎ ಮೊಹಮದ್ ಸಂಘಟನೆಯನ್ನು ಬಳಸಿಕೊಳ್ಳುತ್ತಿದೆ. ಈ ಸಂಘಟನೆ ಮತ್ತು ಅದರ ಮುಖ್ಯಸ್ಥ ಮಸೂದ್ ಅಜರ್‌ನ ಅನಿವಾರ್ಯತೆ ಪಾಕ್ ಆಡಳಿತಕ್ಕೆ ಇದೆ.

ಮೂರು ದಾಳಿಗಳ ಮಾಸ್ಟರ್‌ಮೈಂಡ್

ಭಾರತದಲ್ಲಿ ಪಾಕ್‌ ಮೂಲದ ಉಗ್ರರು ನಡೆಸಿದ ಒಟ್ಟು ಮೂರು ಪ್ರಮುಖ ದಾಳಿಗಳಲ್ಲಿ ಭಾರತದ ತನಿಖಾ ಸಂಸ್ಥೆಗಳು ಮಸೂದ್ ಅಜರ್‌ನನ್ನು ಆರೋಪಿ ಎಂದು ಹೆಸರಿಸಿವೆ. ಸಂಸತ್ತಿನ ಮೇಲೆ ದಾಳಿ (2001), ಅಯೋಧ್ಯೆ ಸ್ಫೋಟ (2005) ಮತ್ತು ಪಠಾಣ್‌ಕೋಟ್ ವಾಯುನೆಲೆ ಮೇಲಿನ ದಾಳಿಗೆ (2016) ಇವನೇ ಸೂತ್ರಧಾರ ಎಂಬುದು ಭಾರತದ ಆರೋಪ. 2008ರಲ್ಲಿ ಮುಂಬೈನಲ್ಲಿ ನಡೆದಿದ್ದ ಭಯೋತ್ಪಾದಕರ ದಾಳಿಯಲ್ಲಿ ಮಸೂದ್ ಅಜರ್‌ನ ಕೈವಾಡವಿತ್ತು ಎಂದು ಭಾರತ ಹೇಳಿತ್ತು. ಭಾರತದಲ್ಲಿ ಕೋಮುಗಲಭೆ ಹುಟ್ಟುಹಾಕಬೇಕು, ಪಾಕಿಸ್ತಾನದೊಂದಿಗೆ ಭಾರತ ಸಶಸ್ತ್ರ ಸಂಘರ್ಷಕ್ಕೆ ಇಳಿಯಬೇಕು ಎನ್ನುವ ಉದ್ದೇಶ ಈ ಎಲ್ಲ ದಾಳಿಗಳ ಉದ್ದೇಶವಾಗಿತ್ತು.

ವಿಮಾನ ಅಪಹರಿಸಿ ಬಿಡಿಸಿಕೊಂಡರು

ಮಸೂದ್‌ ಅಜರ್‌ನನ್ನು 1994ರಲ್ಲಿಯೇ ಭಾರತದ ಭದ್ರತಾ ಸಿಬ್ಬಂದಿ ಬಂಧಿಸಿ ಜೈಲಿಗಟ್ಟಿದ್ದರು. ಡಿಸೆಂಬರ್ 1999ರಲ್ಲಿಇಂಡಿಯನ್ ಏರ್‌ಲೈನ್ಸ್‌ ವಿಮಾನವನ್ನು ಅಫ್ಗಾನಿಸ್ತಾನದ ಕಂದಹಾರ್‌ಗೆ ಅಪಹರಿಸಿ ಕೊಂಡೊಯ್ದಿದ್ದ ಉಗ್ರರು ಪ್ರಯಾಣಿಕರನ್ನು ಒತ್ತೆ ಇರಿಸಿಕೊಂಡು ಮಸೂದ್‌ ಅಜರ್‌ನನ್ನು ಬಿಡಿಸಿಕೊಂಡಿದ್ದರು. ಅಂದಿನ ತಾಲೀಬಾನ್, ಅಲ್‌ಖೈದಾ ಮತ್ತು ಐಎಸ್‌ಐ ಮುಖ್ಯಸ್ಥರು ಈ ಪ್ರಕಣದಲ್ಲಿ ಉಗ್ರರನ್ನು ಬೆಂಬಲಿಸಿದ್ದರು.ಪ್ರಸ್ತುತ ಅಫ್ಗಾನಿಸ್ತಾನ ಮತ್ತು ಬಲೂಚಿಸ್ತಾನಗಳಲ್ಲಿ ಉಗ್ರಗಾಮಿ ಚಟುವಟಿಕೆಗಳನ್ನು ನಡೆಸುತ್ತಿರುವ ಅಖ್ತರ್ ಇಬ್ರಾಹಿಂ ವಿಮಾನ ಅಪಹರಣ ಕಾರ್ಯಾಚರಣೆಯ ನಾಯಕತ್ವ ವಹಿಸಿಕೊಂಡಿದ್ದ. ಸುಮಾರು 20 ವರ್ಷಗಳಿಂದ ಈತನ ಬಂಧನಕ್ಕಾಗಿ ಭಾರತ ಹಲವು ರೀತಿಯಲ್ಲಿ ಪ್ರಯತ್ನಿಸುತ್ತಲೇ ಇತ್ತು.

ಕಾಶ್ಮೀರ ಮುಕ್ತಿಗೆ ಪ್ರತಿಜ್ಞೆ

ಕಂದಹಾರ್‌ನಿಂದ ಕರಾಚಿಗೆ ಮರಳಿದ ನಂತರ ಸುಮಾರು 10 ಸಾವಿರ ಜನರು ಸೇರಿದ್ದ ಭಾರೀ ಸಮಾವೇಶದಲ್ಲಿ ಬಹಿರಂಗವಾಗಿ ಕಾಣಿಸಿಕೊಂಡ ಮಸೂದ್ ಅಜರ್, ‘ಭಾರತವನ್ನು ನಾಶಪಡಿಸುವವರೆಗೆ ನಾವು ನಿದ್ದೆ ಮಾಡಬಾರದು. ಕಾಶ್ಮೀರಕ್ಕೆ ಭಾರತದ ಆಡಳಿತದಿಂದ ಮುಕ್ತಿ ಕೊಡಿಸುತ್ತೇನೆ’ ಎಂದು ಪ್ರತಿಜ್ಞೆ ಮಾಡಿದ್ದ. ಮಸೂದ್‌ ಅಜರ್‌ನಲ್ಲಿ ವಿಶ್ವಸಂಸ್ಥೆಯು ಜಾಗತಿಕ ಭಯೋತ್ಪಾದಕ ಎಂಬುದಾಗಿ ಘೋಷಿಸಬೇಕು ಎಂದು ಭಾರತ ಹಲವು ಬಾರಿ ಒತ್ತಾಯಿಸಿತ್ತು. ಭಾರತದ ಪ್ರಸ್ತಾವವನ್ನು ಚೀನಾ ಪ್ರತಿಬಾರಿಯೂ ವಿಟೊ ಅಧಿಕಾರ ಬಳಸಿ ತಡೆಯುತ್ತಿತ್ತು.

ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರಗಾಮಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಮಸೂದ್ ಅಜರ್‌ನ ಸೋದರ ರವೂಫ್ ಅಸ್ಗರ್ ಇದೀಗ ಭಾರತಕ್ಕೆ ಹೊಸ ತಲೆನೋವಾಗಿದ್ದಾನೆ. ಅಮೆರಿಕದ ಸಹಕಾರದೊಂದಿಗೆ ರವೂಫ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ಭಾರತ ರಾಜತಾಂತ್ರಿಕ ಪ್ರಯತ್ನಗಳನ್ನು ನಡೆಸುತ್ತಿದೆ.

ಇದನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.