ADVERTISEMENT

ಮುಂಬೈ, ಸಂಸತ್ ಮೇಲಿನ ದಾಳಿ ಸೂತ್ರಧಾರಿ ಮಸೂದ್ ಅಜರ್: ಉಗ್ರ ಇಲ್ಯಾಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಸೆಪ್ಟೆಂಬರ್ 2025, 13:09 IST
Last Updated 17 ಸೆಪ್ಟೆಂಬರ್ 2025, 13:09 IST
   

ನವದೆಹಲಿ: 26/11 ಮುಂಬೈ ದಾಳಿ ಮತ್ತು ಸಂಸತ್ ಮೇಲಿನ ದಾಳಿಯ ಸೂತ್ರಧಾರಿ ನನ್ನ ಬಾಸ್ ಮಸೂದ್ ಅಜರ್ ಆಗಿದ್ದನು ಎಂದು ಭಯೋತ್ಪಾದಕ ಸಂಘಟನೆ ಜೈಷ್ ಎ ಮೊಹಮ್ಮದ್‌ನ ಹಿರಿಯ ಕಮಾಂಡರ್ ಹೇಳಿಕೆ ನೀಡಿದ್ದಾನೆ.

ಈ ಉಗ್ರನ ಹೇಳಿಕೆಯು ತಮ್ಮ ನೆಲದಲ್ಲಿ ಭಯೋತ್ಪಾದನೆಗೆ ಅವಕಾಶ ನೀಡುತ್ತಿಲ್ಲ ಎಂಬ ಪಾಕಿಸ್ತಾನ ಸರ್ಕಾರದ ಬಣ್ಣ ಬಯಲು ಮಾಡಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ವಿಶ್ವಸಂಸ್ಥೆ ಘೋಷಿಸಿರುವ ಭಯೋತ್ಪಾದಕ ಸಂಘಟನೆ ಜೈಷ್ ಎ ಮೊಹಮ್ಮದ್‌ನ ಉನ್ನತ ಕಮಾಂಡರ್, ಮಸೂದ್ ಇಲ್ಯಾಸ್ ಕಾಶ್ಮೀರಿ ವಿಡಿಯೊವೊಂದರಲ್ಲಿ ಈ ಎಲ್ಲ ವಿಧ್ವಂಸಕ ಕೃತ್ಯಗಳ ಬಗ್ಗೆ ಮಾತನಾಡಿದ್ದಾನೆ. ಐದು ವರ್ಷಗಳ ಜೈಲುಶಿಕ್ಷೆ ಬಳಿಕ ಭಾರತದಿಂದ ಬಿಡುಗಡೆಯಾಗಿದ್ದ ಮಸೂದ್ ಅಜರ್ ಈ ಭಯೋತ್ಪಾದಕ ಕೃತ್ಯಗಳಿಗೆ ಸಂಚು ರೂಪಿಸಿದ್ದ. 2019ರಲ್ಲಿ ಭಾರತ ಟಾರ್ಗೆಟ್ ಮಾಡಿದ್ದ ಬಾಲಾಕೋಟ್ ಅಜರ್ ನೆಲೆಯಾಗಿತ್ತು. ಅಲ್ಲಿಂದಲೇ ಮುಂಬೈ ಮತ್ತು ಸಂಸತ್ ಮೇಲಿನ ದಾಳಿಗೆ ತಂತ್ರ ರೂಪಿಸಿದ್ದ ಎಂದಿದ್ದಾನೆ.

ಈ ಉಗ್ರ ಬಹಿರಂಗಪಡಿಸಿರುವ ಮಾಹಿತಿಯು ಪಾಕಿಸ್ತಾನದ ಸೇನಾ ಭದ್ರತೆಯಲ್ಲೇ ಜೈಷ್ ಉಗ್ರರ ಶಿಬಿರಗಳು ಮುಕ್ತವಾಗಿ ಕಾರ್ಯಾಚರಿಸುತ್ತಿವೆ ಎಂಬ ಭಾರತದ ಆರೋಪಕ್ಕೆ ಇಂಬು ನೀಡಿದೆ.

ಇದಕ್ಕೂ ಮುನ್ನ, ಬಿಡುಗಡೆಯಾದ ಮತ್ತೊಂದು ವಿಡಿಯೊದಲ್ಲಿ ಇಲ್ಯಾಸ್, ಮೇ7ರಂದು ಭಾರತ ನಡೆಸಿದ ದಾಳಿಯಲ್ಲಿ ಜೈಷ್ ಉಗ್ರರ ಬಹವಲ್ಪುರದ ಕೇಂದ್ರ, ಜಾಮೀಯಾ ಮಸೀದಿ ಧ್ವಂಸಗೊಂಡಿತ್ತು. ಅಲ್ಲದೆ, ಅಜರ್ ಕುಟುಂಬ ಛಿದ್ರ ಛಿದ್ರವಾಗಿತ್ತು ಎಂದು ಹೇಳಿದ್ದ.

ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪ್ರಮುಖ ಉಗ್ರ ನೆಲೆಗಳನ್ನು ಧ್ವಂಸ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.