ADVERTISEMENT

ದೆಹಲಿ ಚಲೋ | ರಾಜಧಾನಿಯತ್ತ ಹೊರಟಿದ್ದ ರೈತರನ್ನು ತಡೆದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2024, 16:05 IST
Last Updated 2 ಡಿಸೆಂಬರ್ 2024, 16:05 IST
<div class="paragraphs"><p>ನೊಯಿಡಾದ ಗಡಿಯಲ್ಲಿ ಅಳವಡಿಸಲಾಗಿದ್ದ ಬ್ಯಾರಿಕೇಡ್‌ಗಳನ್ನು ತಳ್ಳಿಕೊಂಡು ರೈತರು ಪ್ರತಿಭಟನಾ ರ್‍ಯಾಲಿಯನ್ನು ಮುಂದುವರಿಸಿದರು </p></div>

ನೊಯಿಡಾದ ಗಡಿಯಲ್ಲಿ ಅಳವಡಿಸಲಾಗಿದ್ದ ಬ್ಯಾರಿಕೇಡ್‌ಗಳನ್ನು ತಳ್ಳಿಕೊಂಡು ರೈತರು ಪ್ರತಿಭಟನಾ ರ್‍ಯಾಲಿಯನ್ನು ಮುಂದುವರಿಸಿದರು

   

–ಪಿಟಿಐ ಚಿತ್ರ

ನವದೆಹಲಿ/ನೊಯಿಡಾ: ಸರ್ಕಾರ ಸ್ವಾಧೀನಪಡಿಸಿಕೊಳ್ಳುವ ಭೂಮಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಉತ್ತರ ಪ್ರದೇಶದ ಸುಮಾರು 20 ಜಿಲ್ಲೆಗಳ ರೈತರು ನೊಯಿಡಾದ ಮಹಾಮಯಾ ಮೇಲ್ಸೇತುವೆಯಿಂದ ದೆಹಲಿಯತ್ತ ಸೋಮವಾರ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿದ ರೈತರನ್ನು ದೆಹಲಿ ಗಡಿಯಲ್ಲಿ ತಡೆಯಲಾಯಿತು.

ADVERTISEMENT

ರೈತರು ದೆಹಲಿ ಪ್ರವೇಶಿಸದಂತೆ ತಡೆಯಲು ದೆಹಲಿ–ನೊಯಿಡಾ ಗಡಿಯಲ್ಲಿ ನೂರಾರು ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ಸಂಯುಕ್ತ ಕಿಸಾನ್‌ ಮೋರ್ಚಾದ (ಗೌತಮ್‌ ಬುದ್ಧ ನಗರ ವಿಭಾಗ) ಬೆಂಬಲದೊಂದಿಗೆ 12 ರೈತ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು.

‘ಬೋಲ್‌ ಕಿಸಾನ್‌, ಹಲ್ಲಾ ಬೋಲ್‌’ (ಮಾತನಾಡಿ ರೈತರೇ, ಧ್ವನಿ ಎತ್ತಿ) ಎಂಬ ಘೋಷಣೆಗಳನ್ನು ಕೂಗುತ್ತಾ ನೊಯಿಡಾ ಗಡಿಯಲ್ಲಿ ಪೊಲೀಸರು ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನು ತಳ್ಳಿಕೊಂಡು, ದೂಡಿಕೊಂಡು ರೈತರು ದೆಹಲಿಯತ್ತ ಮುಂದೆ ಸಾಗಿಬಂದರು. ಮಧ್ಯಾಹ್ನ 1ರ ಸುಮಾರಿಗೆ ದೆಹಲಿಯ ಚಿಲ್ಲಾ ಗಡಿ ಹತ್ತಿರದ ದಲಿತ್‌ ಪ್ರೇರಣ್‌ ಸ್ಥಲ್‌ ಪ್ರದೇಶದಲ್ಲಿ ರೈತರನ್ನು ಪೊಲೀಸರು ತಡೆದು ನಿಲ್ಲಿಸಿದರು.

ಬೇಡಿಕೆಗಳ ಸಂಬಂಧ ರೈತರು ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳ ಮಾತುಕತೆಯು ಭಾನುವಾರ ನಡೆದಿತ್ತು. ಆದರೆ, ಈ ಮಾತುಕತೆ ಫಲಪ್ರದವಾಗಲಿಲ್ಲ. ಆದ್ದರಿಂದ ರೈತರು ಪ್ರತಿಭಟನಾ ಮೆರವಣೆಯನ್ನು ಘೋಷಿಸಿದವು. ‘ಸೋಮವಾರ ರೈತರು ಹಾಗೂ ಸರ್ಕಾರಿ ಅಧಿಕಾರಿಗಳು ಮತ್ತೊಮ್ಮೆ ಮಾತುಕತೆ ನಡೆಸಿದರು. ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದರಿಂದ ರೈತರು ಮೆರವಣಿಗೆಯನ್ನು ಕೈಬಿಟ್ಟರು’ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸಂಚಾರ ದಟ್ಟಣೆ: ಚಿಲ್ಲಾ ಗಡಿ, ಡಿಎನ್‌ಡಿ ಮೇಲ್ಸೇತುವೆ, ದೆಹಲಿ ಗೇಟ್‌ ಹಾಗೂ ಕಲಿಂದೀ ಕುಂಜ್‌ ಪ್ರದೇಶಗಳಲ್ಲಿ ಗಂಟೆಗಟ್ಟಲೆ ಸಂಚಾರ ದಟ್ಟಣೆ ಉಂಟಾಗಿತ್ತು. ‘ಚಿಲ್ಲಾ ಗಡಿ ಪ್ರದೇಶವನ್ನು ದಾಟಲು ಒಂದು ತಾಸು ಬೇಕಾಯಿತು. ದೆಹಲಿ–ನೊಯಿಡಾ ಗಡಿಯ ಎರಡೂ ಬದಿಗಳಲ್ಲಿ ಬ್ಯಾರಿಕೇಡ್‌ ಅಳವಡಿಸಲಾಗಿತ್ತು. ಇದರಿಂದ ಸಂಚಾರ ದಟ್ಟಣೆ ಉಂಟಾಯಿತು’ ಎಂದು ಗ್ರೇಟರ್‌ ನೊಯಿಡಾ ನಿವಾಸಿ ಅಪರಾಜಿತ್ ಸಿಂಗ್‌ ಹೇಳಿದರು. ‘ಕಾರಿನಲ್ಲಿ ಕೆಲಸಕ್ಕೆ ಹೋಗುವ ಬದಲು ಮೆಟ್ರೊದಲ್ಲಿ ಪ್ರಯಾಣಿಸಿದೆ’ ಎಂದು ನೊಯಿಡಾದ ಅಮಿತ್‌ ಠಾಕೂರ್ ಹೇಳಿದರು.

‘ಎಂಎಸ್‌ಪಿ ಖಾತರಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮತ್ತೊಮ್ಮೆ ದೆಹಲಿಯತ್ತ ಬರಲಾಗುವುದು’ ಎಂದು ಶಂಭು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಸಂಯುಕ್ತ ಕಿಸಾನ್‌ ಮೋರ್ಚಾ (ರಾಜಕೀಯೇತರ) ಹಾಗೂ ಕಿಸಾನ್‌ ಮಜ್ದೂರ್‌ ಮೋರ್ಚಾ ಹೇಳಿದೆ. ಡಿ.6ಕ್ಕೆ ಮೊದಲ ಗುಂಪು ದೆಹಲಿಯತ್ತ ಹೊರಡಲಿದೆ ಎಂದೂ ಹೇಳಿದೆ.

ಪೊಲೀಸರು ಅಳವಡಿಸಿದ್ದ ಬ್ಯಾರಿಕೇಡ್‌ಗಳ ಕಾರಣದಿಂದ ದೆಹಲಿ–ನೊಯಿಡಾ ಗಡಿಯಲ್ಲಿ ಸೋಮವಾರ ತೀವ್ರ ದಟ್ಟಣೆ ಉಂಟಾಗಿತ್ತು –ಪಿಟಿಐ ಚಿತ್ರ
ಗಡಿ ಭಾಗದಲ್ಲಿ ತಪಾಸಣೆಯನ್ನು ಬಿಗಿಗೊಳಿಸಲಾಗಿದೆ. ಡ್ರೋನ್‌ ಮೂಲಕ ಕಣ್ಗಾವಲು ಇರಿಸಲಾಗಿದೆ. ಗಲಭೆ ತಡೆ ಉಪಕರಣವನ್ನೂ ಅಳವಡಿಕೆ ಮಾಡಿಕೊಳ್ಳಲಾಗಿದೆ
ಸಾಗರ್‌ ಕಲ್ಸಿ ಹೆಚ್ಚುವರಿ ಪೊಲೀಸ್‌ ಆಯುತ್ತ (ಪೂರ್ವ)
ಸಂಸತ್ತು ಅಧಿವೇಶನ ನಡೆಯುತ್ತಿರುವುದರಿಂದ ದೆಹಲಿಯಾದ್ಯಂತ ಸೆಕ್ಷನ್‌ 163 ಜಾರಿಯಲ್ಲಿದೆ. ಅನುಮತಿ ಇಲ್ಲದ ಪ್ರತಿಭಟನೆಗಳಿಗೆ ಅವಕಾಶವಿಲ್ಲ. ಇದಕ್ಕಾಗಿಯೇ ಬಿಗಿ ಕಣ್ಗಾವಲು ಏರ್ಪಡಿಸಲಾಗಿದೆ
ಎಸ್‌.ಕೆ. ಜೈನ್‌ ಜಂಟಿ ಪೊಲೀಸ್‌ ಆಯುಕ್ತ
ಪ್ರತಿಭಟನೆಯನ್ನು ತಡೆಯಲು ಮೋರ್ಚಾದ ಜಿಲ್ಲಾಧ್ಯಕ್ಷ ಗಂಗೇಶ್ವರ್‌ ದತ್ತ ಶರ್ಮಾ ಅವರನ್ನು ಬಂಧಿಸಲಾಗಿದೆ. ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಯುತ್ತದೆ
ಶಶಿಕಾಂತ್‌ ಸಂಯುಕ್ತ ಕಿಸಾನ್‌ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯ

ರೈತರ ಬೇಡಿಕೆಗಳೇನು?

  • 2013ರ ಭೂ ಸ್ವಾಧೀನ ಕಾಯ್ದೆ ಅನ್ವಯ ರೈತರಿಗೆ ನೀಡಬೇಕಿರುವ ಪರಿಹಾರ ಮೊತ್ತವನ್ನು ತಕ್ಷಣವೇ ಪಾವತಿ ಮಾಡಬೇಕು. ಒಟ್ಟು ಪರಿಹಾರ ಮೊತ್ತದಲ್ಲಿ ರೈತರಿಗೆ ಶೇ 33.3ರಷ್ಟು ಮೊತ್ತವನ್ನು ಮಾತ್ರವೇ ನೀಡಲಾಗುತ್ತಿದೆ

  • ಅಭಿವೃದ್ಧಿಪಡಿಸಿದ ಪ್ರದೇಶದಲ್ಲಿ ಶೇ 10ರಷ್ಟು ಜಾಗವನ್ನು ಜಮೀನು ನೀಡಿದ ರೈತನಿಗೆ ನೀಡಬೇಕು ಎಂದು ಕಾಯ್ದೆ ಹೇಳುತ್ತದೆ. ಆದರೆ ಸರ್ಕಾರ ಇದನ್ನು ನೆರವೇರಿಸಿಲ್ಲ. ಕಾಯ್ದೆಯ ಈ ಅಂಶವನ್ನು ಜಾರಿ ಮಾಡಬೇಕು

  • ಸ್ವಾಧೀನಪಡಿಸಿಕೊಂಡ ಜಾಮೀನಿಗೆ ಸೂಕ್ತ ಬೆಲೆ ನಿಗದಿಪಡಿಸಬೇಕು ಭೂಮಿ ಕಳೆದುಕೊಂಡ ರೈತರ ಕುಟುಂಬಕ್ಕೆ ಉದ್ಯೋಗ ನೀಡಬೇಕು

‘ಶಾಂತಿಯುತವಾಗಿ ಪ್ರತಿಭಟಿಸಲು ಮನವೊಲಿಸಿ’

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಬಹುದು. ಆದರೆ ಜನರಿಗೆ ಯಾವುದೇ ಕಾರಣಕ್ಕೂ ತೊಂದರೆ ನೀಡುವಂತಿಲ್ಲ’ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಹೇಳಿದೆ. ‘ಹೆದ್ದಾರಿಗಳ ಸಂಚಾರಕ್ಕೆ ತಡೆಯೊಡ್ಡದೆ ಜನರಿಗೆ ತೊಂದರೆ ಮಾಡದೇ ಪ್ರತಿಭಟನೆ ನಡೆಸುವಂತೆ ರೈತರ ಮನವೊಲಿಸಬೇಕು’ ಎಂದು ರೈತ ನಾಯಕ ಜಗಜೀತ್‌ ಸಿಂಗ್‌ ಡಲ್ಲೇವಾಲ್‌ ಅವರನ್ನು ಸುಪ್ರೀಂ ಕೋರ್ಟ್‌ ಕೇಳಿಕೊಂಡಿದೆ.

 ಡಲ್ಲೇವಾಲ್‌ ಅವರು ಸದ್ಯ ಖನೌರಿ ಗಡಿಯಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ‘ನಿಮಗೆ ತಿಳಿದಿದೆ. ಖನೌರಿ ಗಡಿಯ ಹೆದ್ದಾರಿಯು ಪಂಜಾಬ್‌ಗೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿಯಾಗಿದೆ. ಪ್ರತಿಭಟಿಸುವುದು ತಪ್ಪು ಅಥವಾ ಸರಿ ಎನ್ನುವ ಬಗ್ಗೆ ನಾವು ಅಭಿಪ್ರಾಯ ನೀಡುತ್ತಿಲ್ಲ’ ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್‌ ಹಾಗೂ ಉಜ್ಜಲ್‌ ಭುಯಾನ್‌ ಅವರಿದ್ದ ಪೀಠವು ಡಲ್ಲೇವಾಲ್‌ ಅವರ ಪರ ವಕೀಲರಿಗೆ ಹೇಳಿದರು. ರೈತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಡಲ್ಲೇವಾಲ್‌ ಅವರು ನ.26ರಂದು ಘೋಷಿಸಿದ್ದರು.

ಉಪವಾಸ ಆರಂಭಿಸಲು ಕೆಲವೇ ಗಂಟೆಗಳ ಮೊದಲು ಪಂಜಾಬ್‌ ಪೊಲೀಸರು ಡಲ್ಲೇವಾಲ್‌ ಅವರನ್ನು ಲೂಧಿಯಾನ ಆಸ್ಪತ್ರೆಗೆ ಒತ್ತಾಯಪೂರ್ವಕವಾಗಿ ಕೊಂಡೊಯ್ದರು. ನ.29ರಂದು ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಯಿತು. ಒತ್ತಾಯಪೂರ್ಕವಾಗಿ ಆಸ್ಪತ್ರೆಗೆ ಕೊಂಡೊಯ್ದ ಪೊಲೀಸರ ಕ್ರಮದ ಕುರಿತು ಡಲ್ಲೇವಾಲ್‌ ಪರವಾಗಿ ಮಾನಹಾನಿ ಪ್ರಕರಣವೊಂದನ್ನು ದಾಖಲಾಗಿದೆ. ಈ ಅರ್ಜಿಯ ವಿಚಾರಣೆಯನ್ನು ಸೋಮವಾರ ಸುಪ್ರೀಂ ಕೋರ್ಟ್‌ ನಡೆಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.