ADVERTISEMENT

ಪ್ರವಾಸಿಗರ ಪಾಲಿನ ಸ್ವರ್ಗ ವಯನಾಡಿನ ಗ್ರಾಮಗಳಲ್ಲಿ ಈಗಿರುವುದು ಕಲ್ಲುಮಣ್ಣುಗಳ ರಾಶಿ

ಪಿಟಿಐ
Published 31 ಜುಲೈ 2024, 11:14 IST
Last Updated 31 ಜುಲೈ 2024, 11:14 IST
<div class="paragraphs"><p>ಭೂಕುಸಿತದ ಬಳಿಕ ಡ್ರೋನ್‌ನಲ್ಲಿ ವಯನಾಡಿನ ಗ್ರಾಮಗಳು ಕಾಣಿಸಿದ್ದು ಹೀಗೆ</p></div>

ಭೂಕುಸಿತದ ಬಳಿಕ ಡ್ರೋನ್‌ನಲ್ಲಿ ವಯನಾಡಿನ ಗ್ರಾಮಗಳು ಕಾಣಿಸಿದ್ದು ಹೀಗೆ

   

ರಾಯಿಟರ್ಸ್‌ ಚಿತ್ರ

ವಯನಾಡು: ದಿನಬೆಳಗಾದರೆ ಜನರ ಓಡಾಟದಿಂದ ತುಂಬಿರುತ್ತಿದ್ದ ವಯನಾಡಿನ ಮುಂಡಕ್ಕೈ ಮತ್ತು ಚುರಲ್‌ಮಲ ಎಂಬ ಹೆಸರಿನ ಪುಟ್ಟ ಪಟ್ಟಣಗಳು ಸೋಮವಾರ ಕಳೆದು ಮಂಗಳವಾರ ಬೆಳಗಾಗುವಷ್ಟರಲ್ಲಿ ನಾಮಾವಶೇಷಗೊಂಡಿವೆ. 

ADVERTISEMENT

ಕಣ್ಣಿಹಾಯಿಸಿದಷ್ಟು ದೂರ ಕಾಣುವುದು ನಲಸಮವಾದ ಕಟ್ಟಡಗಳು, ಕೆಸರು ತುಂಬಿದ ಗುಂಡಿಗಳು, ಬಿರುಕು ಬಿಟ್ಟ ಭೂಮಿ, ಬೃಹತ್ ಬಂಡೆಗಳ ರಾಶಿ.

ವಯನಾಡು ಎಂದರೆ ಪ್ರವಾಸಿಗರ ಪಾಲಿಗೆ ಸ್ವರ್ಗ. ಚುರಲ್‌ಮಲ ಜಲಪಾತ, ಸೂಚಿಪ್ಪರ. ವೆಲ್ಲೊಲ್ಲಿಪರ ಜಲಪಾತಗಳು, ಸೀತಾ ಸರೋವರ ಹೀಗೆ ಇನ್ನೂ ಹಲವು ಜಾಗಗಳಲ್ಲಿ ಸದಾ ಕಾಲ ಪ್ರವಾಸಿಗರು ಗಿಜುಗುಡುತ್ತಿದ್ದರು. ಆದರೆ ಈಗ ಅದೇ ಜಾಗದಲ್ಲಿ ಗುಡ್ಡದ ಅವಶೇಷಗಳು ಬಿದ್ದಿವೆ. ಬೆಟ್ಟದ ತುದಿಯಿಂದ ನೀರಿನೊಂದಿಗೆ ಬಂದ ದೈತ್ಯ ಬಂಡೆಗಳು ತುಂಬಿವೆ. ಈ ಸ್ಥಳವು ಒಂದು ದಿನದ ಹಿಂದಿನವರೆಗೂ ಜನನಿಬಿಡ ಪಟ್ಟಣವಾಗಿತ್ತು ಎಂದು ನಂಬುವುದೇ ಕಷ್ಟ ಎನ್ನುವಂತಾಗಿದೆ.

ಇನ್ನೊಂದೆಡೆ, ಗಾಯಗೊಂಡವರ ನೋವು, ಮೃತರ ಕುಟುಂಬ ಸದಸ್ಯರ ಆಕ್ರಂದನ, ಕುಸಿದ ಮನೆಗಳು, ದಾರಿಯುದ್ದಕ್ಕೂ ದಿಕ್ಕಾಪಾಲಾಗಿ ನುಜ್ಜುಗುಜ್ಜಾಗಿ ಬಿದ್ದ ವಾಹನಗಳು ಮಾತ್ರ ಕಾಣಸಿಗುತ್ತಿವೆ.

‘ನಾವು ಎಲ್ಲವನ್ನೂ, ಎಲ್ಲರನ್ನೂ ಕಳೆದುಕೊಂಡಿದ್ದೇವೆ, ನಮ್ಮದೆಂದು ಏನೂ ಉಳಿದಿಲ್ಲ, ಮುಂಡಕ್ಕೈ ಪಟ್ಟಣ ವಯನಾಡಿನಲ್ಲಿ ಇತ್ತು ಎನ್ನುವುದೇ ನಕ್ಷೆಯಿಂದ ಕಾಣೆಯಾಗಿದೆ’ ಎಂದು ವೃದ್ದರೊಬ್ಬರು ಭಾವುಕರಾದರು.

‘ನೀವೇ ನೋಡಬಹುದು.. ಮಣ್ಣಿನ ರಾಶಿ ಮತ್ತು ಕಲ್ಲು ಬಂಡೆಗಳ ಹೊರತಾಗಿ ಏನೂ ಉಳಿದಿಲ್ಲ ಇಲ್ಲಿ. ಈ ಕೆಸರಿನ ಮಣ್ಣಿನಲ್ಲಿ ಸರಿಯಾಗಿ ನಡೆದಾಡಲೂ ಆಗುತ್ತಿಲ್ಲ, ಹೀಗಿದ್ದಾಗ ಮಣ್ಣಿನಡಿ ಸಿಲುಕಿರುವ ನಮ್ಮ ಪ್ರೀತಿ ಪಾತ್ರರನ್ನು ಹುಡುಕುವುದಾದರೂ ಹೇಗೆ?’ ಎಂದು ಮತ್ತೊಬ್ಬ ವ್ಯಕ್ತಿ ಕಣ್ಣೀರಾದರು.

ಅನಧಿಕೃತ ಮಾಹಿತಿ ಪ್ರಕಾರ ಮುಂಡಕ್ಕೈ ಗ್ರಾಮದಲ್ಲಿ 400–500 ಮನೆಗಳಿದ್ದವು, ಅದರಲ್ಲಿ ಈಗ ಉಳಿದಿರುವುದು 34–49 ಮಾತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.