ADVERTISEMENT

ಪಂಜಾಬ್‌: ಸಿ.ಎಂ ನಿವಾಸದ ಎದುರು ಬೃಹತ್‌ ಪ್ರತಿಭಟನೆ

ಕನಿಷ್ಠ ಕೂಲಿಗೆ ಆಗ್ರಹಿಸಿ ರೈತರಿಂದ ಮುಷ್ಕರ, ಪೊಲೀಸರಿಂದ ಲಾಠಿಚಾರ್ಜ್‌

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2022, 15:48 IST
Last Updated 30 ನವೆಂಬರ್ 2022, 15:48 IST
ಭಗವಂತ್‌ ಮಾನ್‌
ಭಗವಂತ್‌ ಮಾನ್‌   

ಚಂಡೀಗಡ: ದಿನಗೂಲಿಯನ್ನು ಕನಿಷ್ಠ ₹700ಗೆ ಏರಿಕೆ ಮಾಡಬೇಕು ಮತ್ತು 5 ಮಾರ್ಲಾ ಭೂಮಿ ಯೋಜನೆಯನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿ ರೈತರು ಮತ್ತು ಕಾರ್ಮಿಕ ಸಂಘಟನೆಗಳು ಪಂಜಾಬ್‌ ಮುಖ್ಯಮಂತ್ರಿ ಭಗವಂತ್ ಮಾನ್‌ ಅವರ ಸಂಗ್ರೂರ್‌ ನಿವಾಸದ ಎದುರು ಬುಧವಾರ ಬೃಹತ್‌ ಪ್ರತಿಭಟನೆ ನಡೆಸಿದರು ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಪಟಿಯಾಲಾ ಬೈಪಾಸ್‌ನಲ್ಲಿ ಸೇರಿದ ಪ್ರತಿಭಟನಾಕಾರರು ಮಧ್ಯಾಹ್ನ 3 ಗಂಟೆ ಸುಮಾರಿಗೆ ಮುಖ್ಯಮಂತ್ರಿಗಳ ನಿವಾಸದತ್ತ ಸಾಗಿದರು. ಮುಖ್ಯಮಂತ್ರಿ ಅವರ ನಿವಾಸದ ಸಮೀಪ ಬರುತ್ತಿದ್ದಂತೆಯೇ ಪೊಲೀಸರು ತಡೆದರು. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಸಂಘರ್ಷ ಏರ್ಪಟ್ಟು, ಪ್ರತಿಭಟನಕಾರರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.

ಧ್ವಜ ಹಿಡಿದು, ಘೋಷಣೆ ಕೂಗುತ್ತಿರುವ ರೈತರನ್ನು ಪೊಲೀಸರು ಥಳಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ADVERTISEMENT

ಈ ಬಗ್ಗೆ ಪ್ರತಿಕ್ರಿಯಿಸಿರುವಆಮ್ ಆದ್ಮಿ ಪಕ್ಷ, ಪ್ರತಿಭಟನೆಯ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಆರೋಪಿಸಿದೆ.

ಸದ್ಯ, ಮುಖ್ಯಮಂತ್ರಿ ಮಾನ್‌ ಗುಜರಾತ್‌ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಹಮದಾಬಾದ್‌ನಲ್ಲಿ ಪಕ್ಷದ ಪರ ಪ್ರಚಾರ ನಡೆಸುತ್ತಿದ್ದಾರೆ.

ಬೇಡಿಕೆ ಏನು?:

ಮಹಾತ್ಮ ಗಾಂಧೀಜಿ ಉದ್ಯೋಗ ಖಾತರಿ ಯೋಜನೆ (ಎಂನರೇಗಾ) ಅಡಿಯಲ್ಲಿ ದಿನಗೂಲಿಯನ್ನು ಕನಿಷ್ಠ ₹700ಕ್ಕೆ ಏರಿಕೆ ಮಾಡಬೇಕು ಮತ್ತು 5 ಮಾರ್ಲಾ ಯೋಜನೆ ಜಾರಿ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಗ್ರಾಮೀಣ ಸಹಕಾರ ಸಮಾಜಗಳಲ್ಲಿ ದಲಿತ ಸಮುದಾಯಕ್ಕೆ ಶೇಕಡ 33ರಷ್ಟು ಪ್ರಾತಿನಿಧ್ಯ ನೀಡಬೇಕು, ಭೂಸ್ವಾಧೀನ ಪರಿಹಾರ ಪ್ರಮಾಣವನ್ನು ಹೆಚ್ಚಿಸಬೇಕು, ಬೆಳೆಹಾನಿ ಹಾಗೂ ಚರ್ಮಗಂಟು ರೋಗಕ್ಕೆ ತುತ್ತಾಗಿ ಹಸುಗಳು ಮೃತಪಡುತ್ತಿರುವುದರಿಂದ ಸಂಕಷ್ಟಕ್ಕೊಳಗಾದ ರೈತರಿಗೆ ಪರಿಹಾರ ಹಣ ವಿತರಿಸಬೇಕು ಎಂಬ ಬೇಡಿಕೆಯನ್ನೂ ಇಟ್ಟಿದ್ದಾರೆ.

ಕಳೆದ ಅಕ್ಟೋಬರ್‌ನಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತರು 19 ದಿನಗಳ ಕಾಲ ಪ್ರತಿಭಟನೆ ನಡೆಸಿದ್ದರು. ಸರ್ಕಾರ ಬೇಡಿಕೆ ಈಡೇರಿಕೆಗೆ ಒಪ್ಪಿ ಲಿಖಿತ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಸ್ಥಗಿತಗೊಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.