ADVERTISEMENT

ಬಂಡಾಯ ಶಾಸಕರ ಅನರ್ಹತೆ ಎತ್ತಿಹಿಡಿದ ಮದ್ರಾಸ್ ಹೈಕೋರ್ಟ್

ಟಿ.ಟಿ.ವಿ. ದಿನಕರನ್‌ಗೆ ಹಿನ್ನಡೆ, ಎಐಎಡಿಎಂಕೆ ಸರ್ಕಾರ ನಿರಾಳ

ಪಿಟಿಐ
Published 25 ಅಕ್ಟೋಬರ್ 2018, 19:30 IST
Last Updated 25 ಅಕ್ಟೋಬರ್ 2018, 19:30 IST
   

ಚೆನ್ನೈ:ಟಿಟಿವಿ ದಿನಕರನ್ ಪರವಾಗಿ ನಿಂತಿರುವ ಎಐಎಡಿಎಂಕೆಯ 18 ಶಾಸಕರನ್ನು ಅನರ್ಹಗೊಳಿಸುವ ಮದ್ರಾಸ್ ಹೈಕೋರ್ಟ್‌ನ ಹಿಂದಿನ ಮುಖ್ಯ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಅವರ ತೀರ್ಪನ್ನು ಮದ್ರಾಸ್ ಹೈಕೋರ್ಟ್ ಎತ್ತಿಹಿಡಿದಿದೆ.

ಶಾಸಕರ ಬಂಡಾಯದಿಂದ ಬಹುಮತ ಕಳೆದುಕೊಳ್ಳುವ ಆತಂಕದಲ್ಲಿದ್ದಎಐಎಡಿಎಂಕೆ ಸರ್ಕಾರವು ಗುರುವಾರದ ತೀರ್ಪಿನಿಂದ ನಿರಾಳವಾಗಿದೆ.

ಮುಖ್ಯಮಂತ್ರಿ ಇ.ಕೆ.ಪಳನಿಸ್ವಾಮಿ ಅವರ ಆಡಳಿತದಲ್ಲಿ ನಂಬಿಕೆ ಇಲ್ಲ ಎಂದು ಈ ಶಾಸಕರು 2017ರ ಸೆಪ್ಟೆಂಬರ್‌ನಲ್ಲಿ ತಮಿಳುನಾಡು ರಾಜ್ಯಪಾಲರನ್ನು ಭೇಟಿ ಮಾಡಿದ್ದರು. ಅದರ ಬೆನ್ನಲ್ಲೇ ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಈ ಶಾಸಕರನ್ನು ಸ್ಪೀಕರ್ ಪಿ.ಧನಪಾಲ್ ಅನರ್ಹಗೊಳಿಸಿದ್ದರು. ಇದರ ವಿರುದ್ಧ ಶಾಸಕರು ಮದ್ರಾಸ್ ಹೈಕೋರ್ಟ್‌ನ ಮೆಟ್ಟಿಲೇರಿದ್ದರು.

ADVERTISEMENT

ಹೈಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಎಂ.ಸುಂದರ್ ಅವರಿದ್ದ ವಿಭಾಗೀಯ ಪೀಠವು ಜೂನ್ 14ರಂದು ಭಿನ್ನ ತೀರ್ಪು ನೀಡಿತ್ತು. ಶಾಸಕರ ಅನರ್ಹತೆಯನ್ನು‌ಬ್ಯಾನರ್ಜಿ ಎತ್ತಿ ಹಿಡಿದಿದ್ದರು. ಶಾಸಕರ ಅನರ್ಹತೆ ಸಂವಿಧಾನ ಬಾಹಿರ ಎಂದು ಸುಂದರ್ ತೀರ್ಪು ನೀಡಿದ್ದರು. ಇಬ್ಬರು ನ್ಯಾಯಮೂರ್ತಿಗಳ ತೀರ್ಪು ಭಿನ್ನವಾಗಿದ್ದ ಕಾರಣ ಪ್ರಕರಣದ ವಿಚಾರಣೆ ನಡೆಸುವಂತೆ ನ್ಯಾಯಮೂರ್ತಿ ಎಂ. ಸತ್ಯನಾರಾಯಣ ಅವರಿಗೆ ಸುಪ್ರೀಂ ಕೋರ್ಟ್ ಸೂಚಿಸಿತ್ತು.

‘ಸ್ಪೀಕರ್ ಧನಪಾಲ್ ಅವರ ನಿರ್ಧಾರ ನ್ಯಾಯಯುತವಾಗೇ ಇದೆ. ಇಬ್ಬರು ನ್ಯಾಯಮೂರ್ತಿಗಳೂ ಈ ಹಿಂದೆ ನೀಡಿರುವ ತೀರ್ಪನ್ನು ನಾನು ಪರಿಗಣಿಸಿಲ್ಲ. ಪ್ರಕರಣದ ವಿಚಾರಣೆಯನ್ನು ಸ್ವತಂತ್ರ್ಯವಾಗಿ ನಡೆಸಿದ್ದೇನೆ’ ಎಂದು ನ್ಯಾಯಮೂರ್ತಿ ಎಂ.ಸತ್ಯನಾರಾಯಣ ಹೇಳಿದ್ದಾರೆ.

‘ತೀರ್ಪು ನಮ್ಮ ಪರವಾಗಿ ಬರಬಹುದು ಎಂದು ನಿರೀಕ್ಷಿಸಿದ್ದೆವು. ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದೋ ಅಥವಾ ಉಪಚುನಾವಣೆಗೆ ಹೋಗುವುದೋ ಎಂಬುದನ್ನು ಶಾಸಕರ ಜತೆ ಚರ್ಚಿಸಿ ನಿರ್ಧರಿಸುತ್ತೇವೆ’ ಎಂದು ಟಿ.ಟಿ.ವಿ. ದಿನಕರನ್ ಹೇಳಿದ್ದಾರೆ.

ಆದರೆ ಈ ತೀರ್ಪನ್ನು ಆಡಳಿತಾರೂಢ ಪಕ್ಷ ಎಐಎಡಿಎಂಕೆ ಸ್ವಾಗತಿಸಿದೆ.

*****

ಪಳನಿಸ್ವಾಮಿ ನೇತೃತ್ವದ ಸರ್ಕಾರ ಸುಭದ್ರವಾಗಿರಲಿದೆ ಎಂಬುದನ್ನು ಈ ತೀರ್ಪು ಸಾಬೀತು ಮಾಡಿದೆ. ಈ ತೀರ್ಪಿನಿಂದ ನಮಗೆ ಬಹಳ ಸಂತೋಷವಾಗಿದೆ
– ಪಿ.ವಲರ್‌ಮತಿ, ಎಐಎಡಿಎಂಕೆ ವಕ್ತಾರೆ

ಈಗ ಉಪಚುನಾವಣೆಗೆ ಹೋಗುವುದೇ ಸೂಕ್ತ ಎಂದು ನನಗೆ ಅನಿಸುತ್ತಿದೆ. ಏಕೆಂದರೆ ನ್ಯಾಯಾಲಯ ನೀಡುವ ತೀರ್ಪೇ ಬೇರೆ, ಜನರು ನೀಡುವ ತೀರ್ಪೇ ಬೇರೆ
– ಟಿ.ಟಿ.ವಿ.ದಿನಕರನ್, ಎಎಂಎಂಕೆ ಅಧ್ಯಕ್ಷ

ಶಾಸಕರನ್ನು ಅನರ್ಹಗೊಳಿಸುವಾಗ ಸ್ಪೀಕರ್ ಮುಂದಿದ್ದ ದಾಖಲೆ ಮತ್ತು ಸನ್ನಿವೇಷವನ್ನಷ್ಟೇ ನಾನು ಪರಿಗಣಿಸಿದ್ದೇನೆ. ಅದಕ್ಕೂ ಮೊದಲಿನ ಅಥವಾ ಹಿಂದಿನ ಬೇರೆ ಏನನ್ನೂ ಅಲ್ಲ
– ಎಂ.ಸತ್ಯನಾರಾಯಣ, ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.