ADVERTISEMENT

’ಸಂತ’ನ ಆಳ್ವಿಕೆಯ ನಾಡಿನಲ್ಲಿ ಸಂತರೇ ಸುರಕ್ಷಿತವಾಗಿಲ್ಲ: ಮಾಯಾವತಿ

ಗೊಂಡ ಜಿಲ್ಲೆಯ ಅರ್ಚಕರ ಮೇಲೆ ಗುಂಡಿನ ದಾಳಿ; ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಮಾಯಾವತಿ ಟೀಕೆ

ಪಿಟಿಐ
Published 12 ಅಕ್ಟೋಬರ್ 2020, 7:53 IST
Last Updated 12 ಅಕ್ಟೋಬರ್ 2020, 7:53 IST
ಮಾಯಾವತಿ
ಮಾಯಾವತಿ   

ಲಖನೌ: ಗೊಂಡ ಜಿಲ್ಲೆಯ ದೇವಾಲಯದ ಅರ್ಚಕರ ಮೇಲೆ ನಡೆದಿರುವ ಹಲ್ಲೆಯನ್ನು ’ನಾಚಿಕೆಗೇಡಿನ ಸಂಗತಿ’ ಎಂದು ಖಂಡಿಸಿರುವ ಬಹುಜನ ಸಮಾಜವಾದಿ ಪಕ್ಷದ (ಬಿಎಸ್‌ಪಿ) ಅಧ್ಯಕ್ಷೆ ಮಾಯಾವತಿ, ಸಂತನೇ ಆಡಳಿತ ನಡೆಸುತ್ತಿರುವ ಉತ್ತರ ಪ್ರದೇಶ ರಾಜ್ಯದಲ್ಲಿ ಸಂತರೂ ಸುರಕ್ಷಿತವಾಗಿಲ್ಲ’ ಎಂದು ಟೀಕಿಸಿದ್ದಾರೆ.

ಈ ಕುರಿತು ಹಿಂದಿಯಲ್ಲಿ ಟ್ವೀಟ್ ಮಾಡಿರುವ ಮಾಯಾವತಿ, ’ಗೊಂಡ ಜಿಲ್ಲೆಯಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಅರ್ಚಕರೊಬ್ಬರ ಮೇಲೆ ದುಷ್ಕರ್ಮಿಗಳು ಗುಂಡುಹಾರಿಸಿರುವ ಪ್ರಕರಣವನ್ನು ಉಲ್ಲೇಖಿಸಿ, ಇದು ನಾಚಿಕೆಗೇಡಿನ ಸಂಗತಿ’ ಎಂದಿದ್ದಾರೆ.

’ರಾಜಸ್ತಾನದಂತೆ, ಗೊಂಡ ಜಿಲ್ಲೆಯಲ್ಲೂ ಅರ್ಚಕರ ಮೇಲೆ ಭೂಗಳ್ಳರಿಂದ (ಲ್ಯಾಂಡ್ ಮಾಫಿಯಾದವರಿಂದ) ದಾಳಿ ನಡೆದಿದೆ. ದೇವಾಲಯದ ಜಮೀನನ್ನು ಆಕ್ರಮಿಸಿಕೊಳ್ಳುವ ಇಂಥ ಪ್ರಯತ್ನ ನಿಜಕ್ಕೂ ನಾಚಿಕೆಗೇಡಿನ ವಿಷಯ. ಸಂತರ ಆಳ್ವಿಕೆಯ ಈ ರಾಜ್ಯದಲ್ಲಿ ಸಾಧು–ಸಂತರೂ ಸುರಕ್ಷಿತವಾಗಿಲ್ಲ. ಇಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ’ ಎಂದು ಆರೋಪಿಸಿದ್ದಾರೆ.

ADVERTISEMENT

ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ಘಟನೆಗೆ ಸಂಬಂಧಿಸಿದ ಎಲ್ಲಾ ಭೂಗಳ್ಳರ ಎಲ್ಲ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಮಾಯಾವತಿ ಉತ್ತರ ಪ್ರದೇಶ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಹಾಗಯೇ, ಸಾಧು–ಸಂತರಿಗೆ ರಕ್ಷಣೆ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.

ಗೊಂಡ ಜಿಲ್ಲೆಯ ತಿರ್ರೆ ಮನೋರಮಾ ಗ್ರಾಮದ 30 ಎಕರೆಯಲ್ಲಿರುವ ರಾಮ್‌ಜಂಕಿ ದೇವಾಲಯದ ಅರ್ಚಕ ಮತ್ತು ಕೆಲವು ಗ್ರಾಮಸ್ಥರ ನಡುವೆ ಜಮೀನು ಕುರಿತು ವಿವಾದವಿತ್ತು. ಅರ್ಚಕ ಅತುಲ್‌ ಬಾಬಾ ಅಲಿಯಾಸ್ ಸಾಮ್ರಾಟ್ ದಾಸ್ ಮೇಲೆ ಭಾನುವಾರ ಬೆಳಿಗ್ಗೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದರು. ಈ ಘಟನೆಯಲ್ಲಿ ಅವರ ಎಡಬುಜಕ್ಕೆ ಗಾಯವಾಗಿತ್ತು. ಗಾಯಗೊಂಡ ಅರ್ಚಕರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಲಖನೌದ ಕಿಂಜ್‌ ಜಾರ್ಜ್‌ ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ಕಳುಹಿಸಲಾಗಿತ್ತು. ದಾಸ್ ಅವರ ಸ್ಥಿತಿ ಸ್ಥಿರವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೈಲೇಶ್ ಕುಮಾರ್ ಪಾಂಡೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.