ADVERTISEMENT

2027ಕ್ಕೆ ಬಿಎಸ್‌ಪಿ ಏಕಾಂಗಿಯಾಗಿ ಸ್ಪರ್ಧೆ: ಮಾಯಾವತಿ

ಉತ್ತರ ಪ್ರದೇಶದಲ್ಲಿ ಮಾಯಾವತಿ ಬೃಹತ್‌ ರ್‍ಯಾಲಿ;

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 15:40 IST
Last Updated 9 ಅಕ್ಟೋಬರ್ 2025, 15:40 IST
ಬಿಎಸ್‌ಪಿ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದ ಅಪಾರ ಸಂಖ್ಯೆಯ ಕಾರ್ಯಕರ್ತರು – ಪಿಟಿಐ ಚಿತ್ರ
ಬಿಎಸ್‌ಪಿ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದ ಅಪಾರ ಸಂಖ್ಯೆಯ ಕಾರ್ಯಕರ್ತರು – ಪಿಟಿಐ ಚಿತ್ರ   

ಲಖನೌ: ಉತ್ತರಪ್ರದೇಶದ ಚುನಾವಣಾ ರಾಜಕಾರಣದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡುತ್ತಿರುವ ಬಿಎಸ್‌ಪಿ ನಾಯಕಿ ಮಾಯಾವತಿ ಅವರು ಗುರುವಾರ ಪಕ್ಷದ ಅಪಾರ ಕಾರ್ಯಕರ್ತರೊಂದಿಗೆ ಬೃಹತ್‌ ರ್‍ಯಾಲಿ ನಡೆಸಿದರು.

ಬಿಎಸ್‌ಪಿ ಸಂಸ್ಥಾಪಕ ಕಾನ್ಶಿರಾಮ್ ಅವರ ಪುಣ್ಯಸ್ಮರಣೆ ಅಂಗವಾಗಿ ಹಮ್ಮಿಕೊಂಡಿದ್ದ ರ್‍ಯಾಲಿಯಲ್ಲಿ ಎಸ್‌ಪಿ, ಕಾಂಗ್ರೆಸ್‌ ಹಾಗೂ ದಲಿತ ನಾಯಕ ಚಂದ್ರಶೇಖರ್ (ರಾವಣ್) ವಿರುದ್ಧ ಮಾಯಾವತಿ ವಾಗ್ದಾಳಿ ನಡೆಸಿದರು. ಆದರೆ ಬಿಜೆಪಿ ಬಗ್ಗೆ ಮೃದು ಧೋರಣೆ ಅನುಸರಿಸಿದರು.

2027ರ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್‌ಪಿ ಏಕಾಂಗಿಯಾಗಿ ಸ್ಪರ್ಧೆ ಮಾಡಲಿದೆ ಎಂದು ರ್‍ಯಾಲಿಯಲ್ಲಿ ಘೋಷಿಸಿದ ಮಾಯಾವತಿ, ವೇದಿಕೆಯಲ್ಲಿದ್ದ ಸೋದರಳಿಯ ಆಕಾಶ್‌ ಆನಂದ್‌ ಅವರನ್ನು ಬಿಎಸ್‌ಪಿ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿರುವುದಾಗಿ ಪ್ರಕಟಿಸಿದರು.

ADVERTISEMENT

ಮತಪತ್ರಕ್ಕೆ ಮಾಯಾವತಿ ಆಗ್ರಹ:

‘ನಮ್ಮ ಪಕ್ಷದ ಪರಂಪರಾಗತ ದಲಿತ ಮತಗಳನ್ನು ನಮ್ಮಿಂದ ದೂರ ಮಾಡುವ ಷಡ್ಯಂತ್ರ ನಡೆದಿದೆ. ಮುಂಬರುವ ಚುನಾವಣೆಗಳನ್ನು ಮತಪತ್ರಗಳನ್ನು ಬಳಸಿ ನಡೆಸಬೇಕು’ ಎಂದು ಮಾಯಾವತಿ ಆಗ್ರಹಿಸಿದರು.

ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಹೆಸರು ಹೇಳದೇ ಟೀಕಿಸಿದ ಮಾಯಾವತಿ, ‘ ಪಿಡಿಎ(ಹಿಂದುಳಿದ, ದಲಿತ, ಅಲ್ಪಸಂಖ್ಯಾತ) ಸೂತ್ರದ ಮೂಲಕ ರಾಜ್ಯದ ಜನರನ್ನು ಮೂರ್ಖರನ್ನಾಗಿಸಲು ಸಮಾಜವಾದಿ ಪಕ್ಷ ಯತ್ನಿಸುತ್ತಿದೆ. ಅಧಿಕಾರದಲ್ಲಿದ್ದಾಗ ಕಾನ್ಶಿರಾಮ್‌ ಅವರನ್ನು ಒಂದು ದಿನವೂ ಅದು ಸ್ಮರಿಸಲಿಲ್ಲ’ ಎಂದರು.

‘ಕಾಂಗ್ರೆಸ್‌ನವರು ಅಂಬೇಡ್ಕರ್‌ಗೆ ಅಗೌರವ ತೋರಿದರು. ಈಗ ಸಂವಿಧಾನದ ಹೆಸರಿನಲ್ಲಿ ನಾಟಕ ಆಡುತ್ತಿದ್ದಾರೆ’ ಎಂದು ಮಾಯಾವತಿ ಟೀಕಿಸಿದರು.

2012ರಲ್ಲಿ ಅಧಿಕಾರ ಕಳೆದುಕೊಂಡಿದ್ದ ಬಿಎಸ್‌ಪಿ, 2022ರ ವಿಧಾನಸಭೆ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನ ಗೆದ್ದಿತ್ತು. 2024ರ ಲೋಕಸಭೆ ಚುನಾವಣೆಯಲ್ಲಿ ಖಾತೆ ತೆರೆಯಲೂ ಆಗಿರಲಿಲ್ಲ. 

ಲಖನೌನಲ್ಲಿ ಗುರುವಾರ ಹಮ್ಮಿಕೊಂಡಿದ್ದ ರ್‍ಯಾಲಿಯಲ್ಲಿ ಕಾರ್ಯಕರ್ತರತ್ತ ಕೈಬೀಸಿದ ಮಾಯಾವತಿ. ಸೋದರಳಿಯ ಆಕಾಶ್ ಆನಂದ್ ಜೊತೆಗಿದ್ದಾರೆ – ಪಿಟಿಐ ಚಿತ್ರ
ಯೋಗಿ ಆದಿತ್ಯನಾಥರ ಸರ್ಕಾರ ನನ್ನ ಮನವಿ ನಂತರ ಪ್ರವೇಶ ಶುಲ್ಕದ ಹಣದಲ್ಲಿ ಕಾನ್ಶಿರಾಮ್‌ ಅವರ ಸ್ಮಾರಕವನ್ನು ನವೀಕರಿಸಿತು.
ಮಾಯಾವತಿ ಬಿಎಸ್‌ಪಿ ನಾಯಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.