ADVERTISEMENT

ಬಿಜೆಪಿ ಜತೆ ಮೈತ್ರಿ ಇಲ್ಲ: ಮಾಯಾವತಿ

ನಾವು ಯಾವುದೇ ಪಕ್ಷದ ಬಿ ಟೀಂ ಅಲ್ಲ: ಬಿಎಸ್‌ಪಿ ಮುಖ್ಯಸ್ಥೆ ಕಟುನುಡಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2022, 19:30 IST
Last Updated 25 ಫೆಬ್ರುವರಿ 2022, 19:30 IST
 ಮಾಯಾವತಿ
ಮಾಯಾವತಿ   

ಬಸ್ತಿ: ‘ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಎಸ್‌ಪಿಯು ಬಿಜೆಪಿಯೊಂದಿಗೆ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳುವುದಿಲ್ಲ’ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.

ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಎಸ್‌ಪಿ ಇನ್ನೂ ಪ್ರಸ್ತುತವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಮಾಯಾವತಿ ಅವರು, ಸತ್ಯವನ್ನು ಒಪ್ಪಿಕೊಳ್ಳುವ ದೊಡ್ಡತನವನ್ನು ಅಮಿತ್ ಶಾ ತೋರಿದ್ದಾರೆ ಎಂದು ಹೇಳಿದ್ದರು. ಬಿಎಸ್‌ಪಿ–ಬಿಜೆಪಿ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳುತ್ತವೆ ಎಂದು ವಿರೋಧ ಪಕ್ಷಗಳು ಈ ಎರಡೂ ಹೇಳಿಕೆಗಳ ನಂತರ ಆರೋಪಿಸಿದ್ದವು. ಸಮಾಜವಾದಿ ಪಕ್ಷವು, ‘ಬಿಎಸ್‌ಪಿಯು ಬಿಜೆಪಿಯ ಬಿ ಟೀಂ’ ಎಂದು ಆರೋಪಿಸಿತ್ತು.

ಈ ಆರೋಪಗಳಿಗೆ ಮಾಯಾವತಿ ಅವರು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ನಮ್ಮ ಪಕ್ಷವು ಬಿಜೆಪಿಯ ಬಿ ಟೀಂ ಆಗಿದ್ದೇ ನಿಜವಾದರೆ, ಲೋಕಸಭಾ ಉಪಚುನಾವಣೆಯಲ್ಲಿ ನಮ್ಮ ಜೊತೆ ಸಮಾಜವಾದಿ ಪಕ್ಷವು ಮೈತ್ರಿ ಮಾಡಿಕೊಂಡಿದ್ದು ಏಕೆ’ ಎಂದು ಅವರು ಪ್ರಶ್ನಿಸಿದ್ದಾರೆ.

ADVERTISEMENT

‘ಅತ್ಯಾಚಾರ, ಹಲ್ಲೆಗೆ ಗುರಿಯಾದ ದಲಿತರ ಮನೆಗೆ ಬೆಹೆನ್‌ಜೀ (ಮಾಯಾವತಿ) ಭೇಟಿ ನೀಡಿಲ್ಲ ಎಂದು ಈ ಮಾಧ್ಯಮಗಳು ಕೇಳುತ್ತಿವೆ. ಪ್ರಿಯಾಂಕಾ ಗಾಂಧಿಯಂತೆ ಸಂತ್ರಸ್ತರ ಮನೆಗೆ ಹೋಗಿ, ನಾಟಕವಾಡಲು ನಾನು ಯಾವುದೇ ಪಕ್ಷದ ಉಸ್ತುವಾರಿ ಅಥವಾ ಪ್ರಧಾನ ಕಾರ್ಯದರ್ಶಿ ಅಲ್ಲ.ಕಾಂಗ್ರೆಸ್‌ನ ಅಧ್ಯಕ್ಷೆ ಸೋನಿಯಾ ಗಾಂಧಿ ಇರುವಂತೆ, ನಾನು ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷೆ. ಸಂತ್ರಸ್ತರ ಮನೆಗೆ ಹೋಗಿ ಭೇಟಿ ನೀಡಲು, ನೆರವು ನೀಡಲು ನಮ್ಮ ಪಕ್ಷದಲ್ಲಿ ಪದಾಧಿಕಾರಿಗಳಿದ್ದಾರೆ. ಅವರು ಆ ಕೆಲಸ ಮಾಡುತ್ತಾರೆ’ ಎಂದು ಅವರು ಮಾಧ್ಯಮಗಳ ವಿರುದ್ಧವೂ ಹರಿಹಾಯ್ದಿದ್ದಾರೆ.

‘ಹಣದುಬ್ಬರ, ನಿರುದ್ಯೋಗ, ವಲಸೆ ಚುನಾವಣೆಯ ವಿಷಯ’

ಲಖನೌ (ಪಿಟಿಐ): ಹಣದುಬ್ಬರ, ನಿರುದ್ಯೋಗ ಮತ್ತು ಕಾನೂನು ಸುವ್ಯವಸ್ಥೆಯಂಥ ವಿಷಯಗಳು ಚುನಾವಣೆ ಮೇಲೆ ಪ್ರಭಾವ ಬೀರುತ್ತಿರುವುದು ಉತ್ತಮ ವಿಚಾರ ಎಂದು ಮಾಯಾವತಿ ಹೇಳಿದ್ದಾರೆ.

ಉತ್ತರ ಪ್ರದೇಶ ಚುನಾವಣೆಯ ಐದನೇ ಹಂತದ ಮತದಾನದ ಕೊನೆಯ ದಿನದ ಪ್ರಚಾರದಂದು ಮಾತನಾಡಿದ ಅವರು, ‘ನಮ್ಮ ಪಕ್ಷವು ಸಾಮಾನ್ಯ ಜನರಿಗೆ ಸಂಬಂಧಿಸಿದ ವಿಷಯಗಳ ಆಧಾರದಲ್ಲಿ ಚುನಾವಣೆ ಎದುರಿಸುತ್ತಿದೆ. ತಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದು ಸಾಮಾನ್ಯ ಜನರಿಗೆ ನೆಮ್ಮದಿ ಕೊಡುತ್ತೇವೆ’ ಎಂದಿದ್ದಾರೆ.

‘ಹಣದುಬ್ಬರ, ನಿರುದ್ಯೋಗ, ದ್ವೇಷದ ರಾಜಕೀಯ, ಕೆಟ್ಟ ಸ್ಥಿತಿಯಲ್ಲಿರುವ ಕಾನೂನು ಸುವ್ಯವಸ್ಥೆ, ನಿರುದ್ಯೋಗದ ಕಾರಣ ಅನಿವಾರ್ಯತೆಯ ವಲಸೆ, ಬೀಡಾಡಿ ದನಗಳ ಹಾವಳಿ ಮತ್ತು ಇತರ ಸಮಸ್ಯೆಗಳು ಜನರ ಮನಸ್ಸಿನ ಮೇಲೆ ಹೆಚ್ಚು ಪ್ರಭಾವ ಬೀರಿವೆ. ಇದರಿಂದಾಗಿ ಎದುರಾಳಿ ಪಕ್ಷಗಳ ಹಾದಿ ಸುಗಮವಾಗಿಲ್ಲ. ಇದು ಉತ್ತಮ ಸೂಚನೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಮತ್ತೊಂದು ಟ್ವೀಟ್‌ ಮಾಡಿರುವ ಅವರು, ‘ಸಾರ್ವಜನಿಕರ ಹಿತಾಸಕ್ತಿ ಮತ್ತು ಕಲ್ಯಾಣಕ್ಕೆ ಸಂಬಂಧಿಸಿದ ಇಂತಹ ವಿಚಾರಗಳನ್ನು ಇರಿಸಿಕೊಂಡು ಬಿಎಸ್‌ಪಿ ಚುನಾವಣೆ ಎದುರಿಸುತ್ತಿದೆ. 2007 ಮತ್ತು 2017ರಂತೆ ಸರಿಯಾದ ಉದ್ದೇಶ ಮತ್ತು ನೀತಿಗಳನ್ನು ಇರಿಸಿಕೊಂಡು ಕೆಲಸ ಮಾಡಿದರೆ ಕಾನೂನು ಸುವ್ಯವಸ್ಥೆ ಕಾಪಾಡಲು ಸರಿಯಾದ ಏರ್ಪಾಡು ಮಾಡುವ ಮತ್ತು ಉದ್ಯೋಗ ಸೃಷ್ಟಿಸುವ ಮೂಲಕ ಉತ್ತಮ ದಿನಗಳನ್ನು ವಾಪಸ್ಸು ತರಬಹುದು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.